ತ್ರಿಪುರಾ: ಊಹೆಗೆ ನಿಲುಕದು ಮತದಾರನ ಮನ
ಸದ್ಯವೇ ವಿಧಾನಸಭಾ ಚುನಾವಣೆ ನಡೆಯಲಿರುವ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ಪೈಕಿ ಅತಿ ಹೆಚ್ಚು ಜಿದ್ದಾಜಿದ್ದಿಯ ಹೋರಾಟ ಇರುವುದು ತ್ರಿಪುರಾದಲ್ಲಿ. ಇಲ್ಲಿನ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯು ತ್ರಿಪುರಾ ರಾಜಕಾರಣದಲ್ಲಿ ಹಲವು ಪಲ್ಲಟಗಳಿಗೆ ಕಾರಣವಾಯಿತು. ಈಶಾನ್ಯ ರಾಜ್ಯವೊಂದರಲ್ಲಿ ಬಿಜೆಪಿ ಅದೇ ಮೊದಲ ಬಾರಿಗೆ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಬೆಳೆಯಿತು. ಚುನಾವಣೆ ನಡೆದ 59 ಕ್ಷೇತ್ರಗಳಲ್ಲಿ (ಒಟ್ಟು ಕ್ಷೇತ್ರಗಳು 60) 35ರಲ್ಲಿ ಬಿಜೆಪಿ ಗೆಲುವು ದಾಖಲಿಸಿತು. ಬಿಜೆಪಿಯ ಮಿತ್ರಪಕ್ಷ ಐಪಿಎಫ್‌ಟಿ ಎಂಟು ಕ್ಷೇತ್ರಗಳನ್ನು ಗೆದ್ದಿತು. ಬಿಜೆಪಿ ಮತ್ತು ಐಪಿಎಫ್‌ಟಿ ಜೊತೆಯಾಗಿ ಸರ್ಕಾರ ರಚಿಸಿದವು.
2018ರ ಚುನಾವಣೆಯೊಂದಿಗೆ ಸಿಪಿಎಂನ ಸತತ 20 ವರ್ಷಗಳ ಆಳ್ವಿಕೆ ಕೊನೆಗೊಂಡಿತು. ಆದರೆ, ಪ್ರಬಲ ಪ್ರತಿಪಕ್ಷವಾಗಿ ಸಿಪಿಎಂ ಅಲ್ಲಿ ಉಳಿದುಕೊಂಡಿದೆ. ಬಿಜೆಪಿಯ ಲಾಭ, ಕಾಂಗ್ರೆಸ್‌ನ ನಷ್ಟವಾಗಿ ಪರಿಣಮಿಸಿತು. ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗದೆ ರಾಜ್ಯದಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಆ ಪಕ್ಷ ಬಂದಿದೆ. ಆ ಪಕ್ಷಕ್ಕೆ ಸಿಕ್ಕ ಮತಪ್ರಮಾಣ ಶೇ 1.79ರಷ್ಟು ಮಾತ್ರ (2013ರ ಚುನಾವಣೆಯಲ್ಲಿ ಶೇ 36.53). ಕಾಂಗ್ರೆಸ್‌ನ ಸ್ಥಿತಿ ಹೇಗಿದೆ ಎಂಬುದನ್ನು ಈ ಮತಪ್ರಮಾಣವೇ ಹೇಳುತ್ತದೆ.
ಈ ಬಾರಿಯ ಚುನಾವಣಾ ಕಣದ ಚಿತ್ರಣ ಬಹಳ ಭಿನ್ನವಾಗಿಯೇ ಇದೆ. ಗೆಲುವು ಸರಾಗ ಎಂಬ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಪುಟಿದೇಳುವುದು ಅಸಾಧ್ಯ ವೇನಲ್ಲ ಎಂಬ ಸ್ಥಿತಿಯಲ್ಲಿ ಸಿಪಿಎಂ ಇದೆ. ಒಟ್ಟು ಚುನಾವಣಾ ಕಣ ಹೆಚ್ಚು ಸಂಕೀರ್ಣವಾಗಿದೆ.
ಕಳೆದ ಬಾರಿ ಎಂಟು ಕ್ಷೇತ್ರಗಳನ್ನು ಗೆದ್ದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಈಗ ತೀರಾ ದುರ್ಬಲವಾಗಿದೆ. ಪ್ರಮುಖ ನಾಯಕ ಎನ್.ಸಿ. ದೇಬಬರ್ಮಾ ಮೃತರಾಗಿದ್ದಾರೆ. ಬುಡಕಟ್ಟು ಜನರನ್ನೇ ನಂಬಿಕೊಂಡಿರುವ ಈ ಪಕ್ಷಕ್ಕೆ ಬಲವಾದ ಎದುರಾಳಿಯಾಗಿ ಪ್ರದ್ಯೋತ್ ದೇಬಬರ್ಮಾ ಅವರ ಟಿಪ್ರ ಮೊಥಾ ಮೂಡಿ ಬಂದಿದೆ. ಬುಡಕಟ್ಟು ಜನರಿಗೆ ಗ್ರೇಟರ್ ತ್ರಿಪುರಾ ಎಂಬ ಪ್ರತ್ಯೇಕ ರಾಜ್ಯವೇ ಬೇಕು ಎಂಬ ಗಟ್ಟಿ ಬೇಡಿಕೆಯೊಂದಿಗೆ ಟಿಪ್ರ ಮೊಥಾ ಕಣಕ್ಕೆ ಇಳಿದಿದೆ. ಕಳೆದ ಬಾರಿ ಐಪಿಎಫ್‌ಟಿ ಇದೇ ವಿಚಾರ ಮುಂದಿಟ್ಟು ಚುನಾವಣಾ ಕಣ ಪ್ರವೇಶಿಸಿತ್ತು. ಚುನಾವಣೆಯ ಬಳಿಕ ಈ ಬೇಡಿಕೆಯನ್ನು ಈಡೇರಿಸಿಕೊಳ್ಳವುದು ಐಪಿಎಫ್‌ಟಿಗೆ ಸಾಧ್ಯವಾಗಲಿಲ್ಲ. ಹಾಗಾಗಿ, ಐಪಿಎಫ್‌ಟಿಗೆ ಬುಡಕಟ್ಟು ಜನರ ಬೆಂಬಲ ದೊರೆಯುವುದು ಅನುಮಾನ. ಈ ಸಮುದಾಯಗಳು ಒಟ್ಟಾಗಿ ಟಿಪ್ರ ಮೊಥಾ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಯೇ ಅಧಿಕ. ತ್ರಿಪುರಾ ಬುಡಕಟ್ಟು ಪ್ರದೇಶ ಸ್ವಾಯತ್ತ ಜಿಲ್ಲಾ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಿಕ್ಕ ಗೆಲುವು ಪ್ರದ್ಯೋತ್ ಅವರ ಶಕ್ತಿ ಏನು ಎಂಬುದರ ಸೂಚನೆ.
ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ, ತ್ರಿಪುರಾದ ಈ ಹಿಂದಿನ ರಾಜ ಕುಟುಂಬದ ಪ್ರದ್ಯೋತ್ ಅವರು ಜನರ ಮನಗೆಲ್ಲಬಲ್ಲ ವರ್ಚಸ್ಸು ಹೊಂದಿರುವ ನಾಯಕ. ಒಳ್ಳೆಯ ಮಾತುಗಾರ. ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷ ಟಿಪ್ರ ಮೊಥಾ ಜೊತೆಗೆ ಚುನಾವಣಾಪೂರ್ವ ಹೊಂದಾಣಿಕೆಗೆ ತುದಿಗಾಲಲ್ಲಿ ನಿಂತಿದ್ದವು. ಬಿಜೆಪಿ ಹೈಕಮಾಂಡ್ ಜೊತೆಗೆ ಹಲವು ಸುತ್ತಿನ ಮಾತುಕತೆಯನ್ನೂ ಪ್ರದ್ಯೋತ್ ನಡೆಸಿದ್ದಾರೆ. ಆದರೆ, ಖಚಿತ ಭರವಸೆ ಸಿಗದ ಕಾರಣ ಅವರು ಮೈತ್ರಿಗೆ ಮುಂದಾಗಲಿಲ್ಲ. ರಾಷ್ಟ್ರೀಯ ಪಕ್ಷಗಳ ಜೊತೆಗೆ ಗುರುತಿಸಿಕೊಂಡು ಬುಡಕಟ್ಟು ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳ ಬಾರದು ಎಂಬುದರನ್ನು ಅರಿತಿರುವ ಚತುರ ರಾಜಕಾರಣಿ ಅವರು. ಸ್ವತಃ ಕಿಂಗ್ ಆಗದೇ ಇದ್ದರೂ ಕಿಂಗ್‌ಮೇಕರ್ ಆಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಬಿಜೆಪಿಯ ಸ್ಥಿತಿ ಸದೃಢವೇನೂ ಅಲ್ಲ. ಏಕೆಂದರೆ, 2018ರಲ್ಲಿ ಬಿಪ್ಲಬ್ ದೇಬ್ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಅವರಿಗೆ ಅಂತಹ ಜನಪ್ರಿಯತೆ ಇಲ್ಲ ಎಂಬುದನ್ನು ಅರಿತ ಪಕ್ಷವು ಕಳೆದ ವರ್ಷ ಅವರ ಸ್ಥಾನಕ್ಕೆ ಮಾಣಿಕ್ ಸಹಾ ಅವರನ್ನು ತಂದಿತು. ಹಾಗಾಗಿ, ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಲ್ಲಲೇಬೇಕಿರುವ ಸ್ಥಿತಿ ಇದೆ. ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯಂತಹ ವಿಚಾರಗಳು ಬಿಜೆಪಿಗೆ ಹಿನ್ನಡೆ ಉಂಟು ಮಾಡಬಹುದು. ಸಹಾ ಅವರು ಮುಖ್ಯಮಂತ್ರಿಯಾದ ಮೇಲೆ ನಾಲ್ಕು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂಬುದು ಆ ಪಕ್ಷಕ್ಕೆ ಇರುವ ಬಹುದೊಡ್ಡ ಆಶಾಕಿರಣ.
ತಳಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿರುವ ಸಿಪಿಎಂ, ಈ ಬಾರಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಕಳೆ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಶೇ 43.59ರಷ್ಟು ಮತ ಸಿಕ್ಕಿದೆ. ಸಿಪಿಎಂ ಶೇ 42.22ರಷ್ಟು ಮತ ಪಡೆದಿದೆ. ಬಿಜೆಪಿ ಮತ್ತು ಸಿಪಿಎಂ ಪಡೆದ ಸ್ಥಾನಗಳಲ್ಲಿ ದೊಡ್ಡ ಅಂತರ ಇದ್ದರೂ ಮತ ಪ್ರಮಾಣದ ಅಂತರ ಶೇ 1.33ರಷ್ಟು ಮಾತ್ರ. ಕಾಂಗ್ರೆಸ್‌ಗೆ ಕಳೆದ ಬಾರಿ ಶೇ 1.79ರಷ್ಟು ಮತ ಸಿಕ್ಕಿತ್ತು. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಅಂತರ ಬಹಳ ಕಡಿಮೆ ಇತ್ತು. ಈ ಎಲ್ಲ ಅಂಶಗಳು ಸಿಪಿಎಂಗೆ ಅನುಕೂಲಕರವಾಗಿದೆ.
ನಾಗಾಲ್ಯಾಂಡ್: ಸರಳವಲ್ಲ ಚುನಾವನಾ ಕಣ
ನಾಗಾಲ್ಯಾಂಡ್ ವಿಧಾನಸಭೆಯ 60 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಆಡಳಿತಾರೂಢ ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟವು ಕ್ರಮವಾಗಿ 40 ಮತ್ತು 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಪ್ರಮುಖ ವಿರೋಧ ಪಕ್ಷವಾಗಿದ್ದ ಎನ್‌ಪಿಎಫ್ ಸಹ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇದೇ 27ಕ್ಕೆ ಮತದಾನ ನಡೆದು, ಮಾರ್ಚ್ 3ರಂದು ಫಲಿತಾಂಶ ಪ್ರಕಟವಾಗಲಿದೆ. ಮೇಲ್ನೋಟಕ್ಕೆ ಕಾಣುತ್ತಿರುವಂತೆ ನಾಗಾಲ್ಯಾಂಡ್‌ನ ಚುನಾವಣಾ ಕಣ ಸರಳವಾಗಿಲ್ಲ. ತೀರಾ ಸಂಕೀರ್ಣವಾಗಿಯೂ ಇಲ್ಲ.
ಚುನಾವಣೆ ಘೋಷಣೆಗೂ ಮುನ್ನವೇ ನಾಗಾ ಬುಡಕಟ್ಟು ಸಮುದಾಯಗಳ 15ಕ್ಕೂ ಹೆಚ್ಚು ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ‘ಸಲ್ಯೂಷನ್ ಬಿಫೋರ್ ಎಲೆಕ್ಷನ್’ (ಚುನಾವಣೆಗೂ ಮುನ್ನವೇ ಪರಿಹಾರ) ಎಂದು ಈ ಪಕ್ಷಗಳು ಪಟ್ಟು ಹಿಡಿದಿದ್ದವು. ನಾಗಾ ಬುಡಕಟ್ಟು ಸಮುದಾಯಗಳ ಪ್ರಾಬಲ್ಯವಿರುವ ಜಿಲ್ಲೆಗಳಿಗೆ, ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಸ್ವಾಯತ್ತ ಜಿಲ್ಲೆಯ ಮಾನ್ಯತೆ ನೀಡಬೇಕು. ಇಡೀ ನಾಗಾಲ್ಯಾಂಡ್ ಅನ್ನು ಈ ಪರಿಚ್ಛೇದದ ಅಡಿಯಲ್ಲಿ ತರಬೇಕು ಎಂಬುದು ನಾಗಾ ಬುಡಕಟ್ಟು ಪಕ್ಷಗಳ ಹಲವು ದಶಕಗಳ ಒತ್ತಾಯ. ಆದರೆ, ಈ ಬೇಡಿಕೆಯನ್ನು ಬಿಜೆಪಿ ಸಹ ಈಡೇರಿಸುತ್ತಿಲ್ಲ ಎಂಬುದೇ ಚುನಾವಣಾ ಬಹಿಷ್ಕಾರಕ್ಕೆ ಪ್ರಮುಖ ಕಾರಣ. ‘ಬಿಜೆಪಿ ಸಹ ನಮಗೆ ದ್ರೋಹ ಬಗೆದಿದೆ’ ಎಂದು ಈ ಜನರು ಹೇಳುತ್ತಿದ್ದಾರೆ.
ಈ ಪ್ರದೇಶಗಳನ್ನು ಅಥವಾ ಇಡೀ ರಾಜ್ಯವನ್ನು 6ನೇ ಪರಿಚ್ಛೇದಕ್ಕೆ ಸೇರಿಸಿದರೆ, ಕಾನೂನು ರಚನೆ ಮತ್ತು ಭೂಮಂಜೂರಾತಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಇಂತಹ ಅಧಿಕಾರ ದೊರೆತರೆ ನಾಗಾ ಬುಡಕಟ್ಟು ಜನರ ಸಂಸ್ಕೃತಿ ರಕ್ಷಣೆ ಸಾಧ್ಯವಾಗಲಿದೆ ಎಂಬುದು ಈ ಬೇಡಿಕೆಯ ಹಿಂದಿನ ಉದ್ದೇಶ. ಈ ಬೇಡಿಕೆಯನ್ನು ಈಡೇರಿಸುವ ಸಂಬಂಧ ಬಿಜೆಪಿಯು 2015ರಲ್ಲಿ ಈ ಪಕ್ಷಗಳ ಒಟ್ಟಿಗೆ ಮತ್ತು ನಾಗಾ ಬಂಡುಕೋರರ ಒಟ್ಟಿಗೆ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. 2017ರಲ್ಲೂ ಮತ್ತಷ್ಟು ಪಕ್ಷಗಳ ಜತೆಗೆ ಇನ್ನೊಂದು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಗಳ ಫಲವಾಗಿಯೇ, ಎನ್‌ಡಿಪಿಪಿ ಒಟ್ಟಿಗೆ ಮೈತ್ರಿಮಾಡಿಕೊಂಡು 2013ರ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆಯಲ್ಲಿ ಬಿಜೆಪಿ ಭಾಗಿಯಾಗಿತ್ತು. ಆದರೆ ಆನಂತರದ ಸತತ ಮಾತುಕತೆಯ ನಂತರವೂ ನಾಗಾ ಬುಡಕಟ್ಟು ಸಮುದಾಯಗಳ ಬೇಡಿಕೆಯನ್ನು ಈಡೇರಿಸಲು ಎನ್‌ಡಿಪಿಪಿ–ಬಿಜೆಪಿ ಮೈತ್ರಿಕೂಟಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿಯೇ ಹಲವು ಬುಡಕಟ್ಟು ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ಈ
ಬಹಿಷ್ಕಾರವನ್ನು ಆಡಳಿತಾರೂಢ ಎನ್‌ಡಿಪಿಪಿ ಸಹ ಬೆಂಬಲಿಸಿತ್ತು. ಆನಂತರ ಚುನಾವಣಾ ಚಟುವಟಿಕೆಯಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿತು.
ಬಿಜೆಪಿಯ ಈ ನಿಲುವುಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೂ, ಅದು ಮತದಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ. ಬಿಜೆಪಿಯನ್ನು ವಿರೋಧಿಸಿದ್ದ ಎನ್‌ಪಿಎಫ್ ಈಚೆಗಷ್ಟೇ ಯಾವುದೇ ಪಕ್ಷದ ಜತೆಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಸಿದ್ದ ಎಂದು ಹೇಳಿದೆ. ಹೀಗಾಗಿ ಯಾವುದೇ ಪಕ್ಷ ಹೆಚ್ಚು ಸ್ಥಾನಗಳಿಸಿದರೂ ಎನ್‌ಡಿಪಿಪಿ, ಬಿಜೆಪಿ ಮತ್ತು ಎನ್‌ಪಿಎಫ್ ಸರ್ಕಾರದಲ್ಲಿ ಪಾಲುದಾರರಾಗುವುದು ಖಚಿತವಾದಂತಾಗಿದೆ.
ಮೇಘಾಲಯ: ಪುಟ್ಟ ರಾಜ್ಯದಲ್ಲಿ ಬಹುಕೋನ ಸ್ಪರ್ಧೆ
ಬುಡಕಟ್ಟು ಹಾಗೂ ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ಈಶಾನ್ಯದ ಪುಟ್ಟ ರಾಜ್ಯ ಮೇಘಾಲಯದಲ್ಲಿ ಇದೇ 27ರಂದು ವಿಧಾನಸಭೆಗೆ ಮತದಾನ ನಡೆಯಲಿದೆ. ಕಳೆದ ಬಾರಿ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ಬೆಂಬಲಿಸಿದ್ದ ಹಲವು ಪಕ್ಷಗಳು ಈ ಬಾರಿ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದಿರುವುದು ಇಲ್ಲಿಯ ವಿಶೇಷ.
ಕಳೆದ ಚುನಾವಣೆಯವರೆಗೂ ಕಾಂಗ್ರೆಸ್ ಇಲ್ಲಿ ಅತಿದೊಡ್ಡ (21 ಸ್ಥಾನ) ಪಕ್ಷವಾಗಿತ್ತು. ಆದರೆ, ಸುದೀರ್ಘ ಕಾಲದ ಕಾಂಗ್ರೆಸ್ ಆಡಳಿತ 2018ರ ಚುನಾವಣೆಯಲ್ಲಿ ಕೊನೆಗೊಂಡಿತು. ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಕೆ. ಸಂಗ್ಮಾ ಅವರು ಸಣ್ಣಪುಟ್ಟ ಪಕ್ಷಗಳನ್ನು ಒಟ್ಟುಗೂಡಿಸಿ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ನೇತೃತ್ವದಲ್ಲಿ ಸರ್ಕಾರ ರಚಿಸಿದರು. ಬಿಜೆಪಿ, ಈ ಮೈತ್ರಿಕೂಟದ ಕಿರಿಯ ಪಾಲುದಾರ ಪಕ್ಷ. ಯುಡಿಎಫ್, ಪಿಡಿಎಫ್, ಎಚ್‌ಎಸ್‌ಪಿಡಿಪಿ ಶಾಸಕರು ಹಾಗೂ ಪಕ್ಷೇತರರು ಸಂಗ್ಮಾ ಸರ್ಕಾರವನ್ನು ಬೆಂಬಲಿಸಿದ್ದರು.
ಆದರೆ ಈ ಐದು ವರ್ಷಗಳ ಅವಧಿಯಲ್ಲಿ ಸರ್ಕಾರದ ಪಾಲುದಾರ ಪಕ್ಷಗಳ ನಡುವಿನ ಬಂಧ ಗಟ್ಟಿಯಾಗುವ ಬದಲು, ಇನ್ನಷ್ಟು ಸಡಿಲಗೊಂಡಿದೆ. ರಾಜಕೀಯ ಸಮೀಕರಣವು, 2018ರ ಚುನಾವಣೆಗೂ ಮುನ್ನ ಇದ್ದ ಹಂತಕ್ಕೆ ಬಂದಿದೆ. ಕಳೆದ ಬಾರಿ ಈ ಎಲ್ಲ ಪಕ್ಷಗಳೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಈ ಬಾರಿಯೂ ಅದೇ ನಿರ್ಧಾರಕ್ಕೆ ಬಂದಿವೆ. ಒಂದೇ ಮೈತ್ರಿಕೂಟದಲ್ಲಿದ್ದ ಪಕ್ಷಗಳ ನಡುವಿನ ಸ್ಪರ್ಧೆಯಿಂದಾಗಿ ಚುನಾವಣೆ ಕುತೂಹಲ ಕೆರಳಿಸಿದೆ.
ಕಳೆದ ಬಾರಿ ಅತಿಹೆಚ್ಚು (ಶೇ 29ರಷ್ಟು) ಮತಗಳನ್ನು ಗಳಿಸಿಯೂ ಪ್ರತಿಪಕ್ಷದಲ್ಲಿ ಕುಳಿತುಕೊಂಡಿದ್ದ ಕಾಂಗ್ರೆಸ್ ಪ್ರಾಬಲ್ಯ ಈ ಬಾರಿ ಇನ್ನಷ್ಟು ಕುಸಿದಿದೆ. ಪ್ರಮುಖ ನಾಯಕ ಮುಕುಲ್ ಸಂಗ್ಮಾ ನೇತೃತ್ವದಲ್ಲಿ 11 ಶಾಸಕರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಕಳೆದ ವರ್ಷ ವಲಸೆ ಹೋದರು. ಇದು ಪಕ್ಷಕ್ಕೆ ಬಲವಾದ ಪೆಟ್ಟು ನೀಡಿತು. ಈಗ ರಾಜ್ಯದಲ್ಲಿ ಪ್ರಬಲ ಪ್ರತಿಪಕ್ಷ ಎಂದು ಟಿಎಂಸಿಯನ್ನು ಗುರುತಿಸಲಾಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನ ಈ ಪುಟ್ಟ ರಾಜ್ಯದಲ್ಲಿ ಪಕ್ಷಾಂತರದ ಪರ್ವವೇ ನಡೆಯಿತು. 18 ಶಾಸಕರು ಪಕ್ಷಾಂತರ ಮಾಡಿ ಅಚ್ಚರಿ ಮೂಡಿಸಿದರು.
ಬುಡಕಟ್ಟು ರಾಜ್ಯದಲ್ಲಿ ಅಷ್ಟಾಗಿ ನೆಲೆ ಕಂಡುಕೊಳ್ಳದ ಬಿಜೆಪಿ ಕಳೆದ ಚುನಾವಣೆಯಲ್ಲಿ ಶೇ 9.6ರಷ್ಟು ಮತ ಗಳಿಸಿತ್ತು. ಪಕ್ಷದಿಂದ ಆಯ್ಕೆಯಾಗಿದ್ದ ಇಬ್ಬರು ಶಾಸಕರು, ಸ್ಥಳೀಯವಾಗಿ ಪ್ರಬಲರು. ಬಿಜೆಪಿಗೆ ಬರುವ ಮುನ್ನ, ಇತರ ಪಕ್ಷಗಳ ಟಿಕೆಟ್‌ನಡಿಯೂ ಅವರು ಗೆದ್ದ ಇತಿಹಾಸವಿದೆ. ಎಲ್ಲ 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ, ಮೇಘಾಲಯದಲ್ಲಿ ಈ ಬಾರಿ ತನ್ನ ಮತ ಪ್ರಮಾಣವನ್ನು ಎರಡಂಕಿಗೆ ಹೆಚ್ಚಿಸಿಕೊಳ್ಳುವ ಸನ್ನಾಹದಲ್ಲಿದೆ. 10ರಿಂದ 15
ಕ್ಷೇತ್ರಗಳಲ್ಲಿ ಗೆಲ್ಲುವ ಕನಸು ಕಾಣುತ್ತಿದೆ.
ಗಾರೋ ಜಿಲ್ಲಾ ಸ್ವಾಯತ್ತ ಪ್ರದೇಶದ ನಾಯಕ ಬರ್ನಾರ್ಡ್ ಮರಾಕ್ ಅವರು ಈ ಬಾರಿ ಬಿಜೆಪಿಯ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರ ಮೇಲೆ ಎನ್‌ಪಿಪಿ ಸರ್ಕಾರವು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿತ್ತು. ಈ ವಿದ್ಯಮಾನವು ಬಿಜೆಪಿ–ಎನ್‌ಪಿಪಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸಿತ್ತು. ಮರಾಕ್ ಅವರನ್ನು ಎದುರಾಳಿಯಾಗಿ ಬಿಜೆಪಿ ಕಣಕ್ಕಿಳಿ ಸಿದ್ದು, ಸಂಗ್ಮಾ ಅವರನ್ನು ಹಣಿಯಲು ಮುಂದಾಗಿದೆ. ಎನ್‌ಪಿಪಿ, ಬಿಜೆಪಿ, ಟಿಎಂಸಿ, ಕಾಂಗ್ರೆಸ್ ಹಾಗೂ ಸಣ್ಣಪುಟ್ಟ ಪಕ್ಷಗಳ ಪ್ರತ್ಯೇಕ ಸ್ಪರ್ಧೆಯಿಂದಾಗಿ ರಾಜ್ಯದಲ್ಲಿ ಬಹುಕೋನ ಸ್ಪರ್ಧೆ ಏರ್ಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.