ADVERTISEMENT

ತ್ರಿಪುರಾ | 4.15 ಲಕ್ಷ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 14:24 IST
Last Updated 15 ಫೆಬ್ರುವರಿ 2024, 14:24 IST
<div class="paragraphs"><p>ಮಾಣಿಕ್‌ ಸಾಹಾ</p></div>

ಮಾಣಿಕ್‌ ಸಾಹಾ

   

ಅಗರ್ತಲಾ: ತ್ರಿಪುರಾದ ಸುಮಾರು 4.15 ಲಕ್ಷ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆ ಒದಗಿಸುವ ‘ಸಾರ್ವತ್ರಿಕ ಆರೋಗ್ಯ ವಿಮಾ ಯೋಜನೆ’ಗೆ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಗುರುವಾರ ಚಾಲನೆ ನೀಡಿದರು.

ಮುಖ್ಯಮಂತ್ರಿ ಜನ ಆರೋಗ್ಯ ಯೋಜನೆ (ಸಿಎಂ–ಜಯ್‌) ಅಡಿ ಈ ಸೌಲಭ್ಯವನ್ನು ನೀಡಲಾಗಿದೆ. ಸರ್ಕಾರಿ ನೌಕರರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ADVERTISEMENT

‘ಆರೋಗ್ಯ ತುರ್ತು ಪರಿಸ್ಥಿತಿ ಉಂಟಾದರೆ ಜನರು ಅಸಹಾಯಕರಾಗುತ್ತಾರೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ–ಜಯ್‌) ಅಡಿ ಹಲವರು ವಿಮೆ ಸೌಲಭ್ಯ ಹೊಂದಿಲ್ಲ. ಅಂಥವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪಿಎಂ– ಜಯ್‌ಗೆ ಪರ್ಯಾಯವಾಗಿ ರಾಜ್ಯದಲ್ಲಿ ಸಿಎಂ– ಜಯ್‌ ಜಾರಿ ಮಾಡಲಾಗಿದೆ’ ಎಂದು ಸಾಹಾ ತಿಳಿಸಿದರು.

ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗೆ 15 ದಿನಗಳ ವರೆಗೆ ಉಚಿತ ಔಷಧ ನೀಡಲಾಗುವುದು. ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಉಚಿತ ಔಷಧ ಒದಗಿಸಲಾಗುವುದು. ಚಿಕಿತ್ಸೆಯ ಸಂಪೂರ್ಣ ಪ್ರಕ್ರಿಯೆಯು ನಗದುರಹಿತವಾಗಿರಲಿದೆ ಎಂದು ಸಾಹಾ ವಿವರಿಸಿದರು. 

ಯೋಜನೆ ಜಾರಿಗೊಂಡ ಕೆಲದಿನಗಳು ಸಮಸ್ಯೆಗಳು ತಲೆದೂರಬಹುದು. ಆದರೆ, ಅವುಗಳನ್ನು ಸರಿಪಡಿಸಿ ಫಲಾನುಭವಿಗಳಿಗೆ ಯೋಜನೆ ತಲುಪುವಂತೆ ಮಾಡಲಾಗುವುದು ಎಂದರು. 

ಸಾರ್ವತ್ರಿಕ ಆರೋಗ್ಯ ವಿಮಾ ಯೋಜನೆ ಪರಿಚಯಿಸಿರುವ ಮೊದಲ ರಾಜ್ಯ ‘ತ್ರಿಪುರಾ’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಹೆಚ್ಚುವರಿ ಮುಖ್ಯ ಕಾರ್ಯಕಾರಿ ಅಧಿಕಾರಿ ಬಸಂತ್‌ ಗರ್ಗ್‌ ಅವರು ಈ ವೇಳೆ ಹೇಳಿದರು.

ಈ ಯೋಜನೆಗಾಗಿ ರಾಜ್ಯ ಬಜೆಟ್‌ನಲ್ಲಿ ₹69 ಕೋಟಿ ಅನುದಾನ ನೀಡಲಾಗಿತ್ತು.

ದೇಶದ ಮೊದಲ ಎಚ್‌ಇಎಂಎಸ್‌ ಉತ್ತರಾಖಂಡದಲ್ಲಿ ಆರಂಭ
ಭಾರತದ ಮೊದಲ ಹೆಲಿಕಾಪ್ಟರ್‌ ಆಧರಿತ ವೈದ್ಯಕೀಯ ತುರ್ತುಸೇವೆಯನ್ನು (ಎಚ್‌ಇಎಂಎಸ್‌) ಉತ್ತರಾಖಂಡದಲ್ಲಿ ಶೀಘ್ರವೇ ಆರಂಭಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಗುರುವಾರ ತಿಳಿಸಿದ್ದಾರೆ. ಈ ಕುರಿತು ಸಿಂದಿಯಾ ಅವರು ‘ಎಕ್ಸ್‌’ನಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.  ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಆವರಣದಿಂದ ಈ ಹೆಲಿಕಾಪ್ಟರ್‌ ಕಾರ್ಯನಿರ್ವಹಿಸುತ್ತದೆ. ಆಸ್ಪತ್ರೆಯಿಂದ 150 ಕಿ.ಮೀ. ದೂರದ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾದವರನ್ನು ತುರ್ತು ಚಿಕಿತ್ಸೆಗಾಗಿ ಈ ಹೆಲಿಕಾಪ್ಟರ್‌ ಮೂಲಕ ಹೊತ್ತುತರಲಾಗುವುದು. ಈ ಕೆಲಸಕ್ಕೆ ಬಳಸುವ ಹೆಲಿಕಾಪ್ಟರ್‌ನ ಪ್ರಮಾಣೀಕರಣದ ಕೆಲಸ ಚಾಲ್ತಿಯಲ್ಲಿದೆ. ಇದು ಸಂಪೂರ್ಣ ನನ್ನದೇ ಜವಾಬ್ದಾರಿ’ ಎಂದು ಸಿಂದಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.