ಅಗರ್ತಲಾ: ತ್ರಿಪುರಾದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮೃತಪಟ್ಟವರ ಸಂಖ್ಯೆಯು 31ಕ್ಕೆ ಏರಿಕೆಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಾಣಿಕ್ ಸಹಾ, ‘ಪ್ರವಾಹದಿಂದ ಉಂಟಾದ ನಷ್ಟ ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಬಿ.ಸಿ. ಜೋಶಿ ನೇತೃತ್ವದ ತಂಡವು ರಾಜ್ಯಕ್ಕೆ ಆಗಮಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರವಾಹದಿಂದಾಗಿ ಮಂಗಳವಾರವೂ ಐದು ಮೃತದೇಹಗಳು ಪತ್ತೆಯಾಗಿವೆ. ಮನೆಗಳ ಹಾನಿಯಿಂದಾಗಿ ಒಟ್ಟು 72 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. ಸಂತ್ರಸ್ತರು 492 ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಬ್ರಿಜೇಶ್ ಪಾಂಡೆ ತಿಳಿಸಿದ್ದಾರೆ.
ಐದು ಎನ್‌ಡಿಆರ್‌ಎಫ್ ಮತ್ತು ಆರು ಎಸ್‌ಡಿಆರ್‌ಎಫ್ ತಂಡಗಳು ಅತಿ ಹೆಚ್ಚು ಪ್ರವಾಹ ಪೀಡಿತ ಜಿಲ್ಲೆಯಾದ ಗೋಮತಿ ಸೇರಿದಂತೆ ದಕ್ಷಿಣ ತ್ರಿಪುರಾ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿವೆ ಎಂದು ಪಾಂಡೆ ಹೇಳಿದ್ದಾರೆ.
ಪ್ರವಾಹದಿಂದಾಗಿ ರಸ್ತೆಗಳು, ಮನೆಗಳು, ವಿದ್ಯುತ್ ಕಂಬಗಳು ಮತ್ತು ಕೃಷಿ ಭೂಮಿಗೆ ವ್ಯಾಪಕ ಹಾನಿಯಾಗಿದೆ. ಪ್ರವಾಹದಿಂದ ಸುಮಾರು ₹15,000 ಕೋಟಿಯಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.