ADVERTISEMENT

ಅಶೋಕ್ ಗೆಹಲೋತ್‌ಗೆ ಮತ್ತೆ ಇಕ್ಕಟ್ಟು: ಸಚಿವ ಅಶೋಕ್ ಚಂದನ ಬಹಿರಂಗ ಅಸಮಾಧಾನ

ಪಿಟಿಐ
Published 27 ಮೇ 2022, 2:10 IST
Last Updated 27 ಮೇ 2022, 2:10 IST
ಅಶೋಕ್ ಗೆಹಲೋತ್‌ (ಪಿಟಿಐ ಸಂಗ್ರಹ ಚಿತ್ರ)
ಅಶೋಕ್ ಗೆಹಲೋತ್‌ (ಪಿಟಿಐ ಸಂಗ್ರಹ ಚಿತ್ರ)   

ಜೈಪುರ: ರಾಜ್ಯಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರಿಗೆ ಮತ್ತೆ ಭಿನ್ನಮತ ಕಾಟ ಎದುರಾಗಿದೆ. ಕ್ರೀಡಾ ಸಚಿವ ಅಶೋಕ್ ಚಂದನ ಅವರು ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ‘ಅಗೌರವ’ದ ಸಚಿವ ಸ್ಥಾನದಿಂದ ಮುಕ್ತಗೊಳಿಸುವಂತೆ ಕೋರಿದ್ದಾರೆ.

‘ಅಗೌರವದ ಸಚಿವ ಸ್ಥಾನದಿಂದ ನನ್ನನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ನನ್ನ ಇಲಾಖೆಯ ಎಲ್ಲ ಅಧಿಕಾರವನ್ನು ಕುಲದೀಪ್ ರಂಕಾ ಅವರಿಗೆ ನೀಡಿ. ಹೇಗೂ ಎಲ್ಲ ಇಲಾಖೆಗಳನ್ನು ಅವರೇ ಹೊಂದಿದ್ದಾರೆ’ ಎಂದು ಅಶೋಕ್ ಚಂದನ ಟ್ವೀಟ್ ಮಾಡಿದ್ದಾರೆ.

ಕುಲದೀಪ್ ರಂಕಾ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಈ ಬೆಳವಣಿಗೆ ನಡೆದಿದ್ದು, ಪಕ್ಷದೊಳಗೆ ಅಸಮಾಧಾನದ ಹೊಗೆಯಾಡುತ್ತಿರುವುದು ಬಹಿರಂಗವಾಗಿದೆ. ವಾರದ ಹಿಂದಷ್ಟೇ, ಡಂಗರ್‌ಪುರದ ಶಾಸಕ ಗಣೇಶ್ ಘೋಘರ ತಮ್ಮ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ಪ್ರತಿಭಟಿಸಿ ರಾಜೀನಾಮೆ ನೀಡಿದ್ದರು.

ಈ ಮಧ್ಯೆ, ಚಂದನ ಅವರ ಟ್ವೀಟ್‌ ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

‘ಈ ಹಡಗು (ಕಾಂಗ್ರೆಸ್) ಮುಳುಗುತ್ತಿದೆ. 2023ರ ಟ್ರೆಂಡ್ ಈಗಲೇ ಆರಂಭವಾಗಿದೆ’ ಎಂದು ಬಿಜೆಪಿಯ ರಾಜಸ್ಥಾನ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.