ADVERTISEMENT

ಟಿಆರ್‌ಪಿ ತಿರುಚಿದ ಹಗರಣ: ದಾಸ್‌ಗುಪ್ತಾ ಕಸ್ಟಡಿ ವಿಸ್ತರಣೆ

ಪಿಟಿಐ
Published 29 ಡಿಸೆಂಬರ್ 2020, 19:32 IST
Last Updated 29 ಡಿಸೆಂಬರ್ 2020, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ನ (ಬಿಎಆರ್‌ಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಸಕ್ತ ಬಂಧನದಲ್ಲಿರುವ ಪಾರ್ಥೊ ದಾಸ್‌ಗುಪ್ತಾ ಹಾಗೂ ಈ ಸಂಸ್ಥೆಯ ಇನ್ನೊಬ್ಬ ಅಧಿಕಾರಿ ಶಾಮೀಲಾಗಿ, ರಿಪಬ್ಲಿಕ್‌ ಟಿವಿ ಹಾಗೂ ರಿಪಬ್ಲಿಕ್‌ ಭಾರತ್‌ವಾಹಿನಿಗಳ ಪರವಾಗಿ ಟಿಆರ್‌ಪಿಯನ್ನು ತಿರುಚಿದ್ದರು’ ಎಂದು ಮುಂಬೈ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ಆರ್ಥಿಕ ಲಾಭಕ್ಕಾಗಿ ಈ ಅಧಿಕಾರಿಗಳು ಆಯ್ದ ವಾಹಿನಿಗಳ ಟಿಆರ್‌ಪಿಗಳನ್ನು ತಿರುಚುತ್ತಿದ್ದರು. ಇವರಲ್ಲದೆ, ಬಿಎಆರ್‌ಸಿಯ ಮಾಜಿ ಸಿಒಒ ರೋಮಿಲ್‌ ರಾಮಘರಿಯಾ ಅವರು ಸಹ ದಾಸ್‌ಗುಪ್ತಾ ಅವರನ್ನು ಸಂಪರ್ಕಿಸಿ ಕೆಲವು ವಾಹಿನಿಗಳ ಟಿಆರ್‌ಪಿ ತಿರುಚಲು ಮನವಿ ಮಾಡಿಕೊಂಡಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ಹಾಗೂ ಇತರ ಕೆಲವರ ಜತೆಗೆ ದಾಸ್‌ಗುಪ್ತಾ ಅವರು ಸಂಪರ್ಕದಲ್ಲಿದ್ದರು. ಗೋಸ್ವಾಮಿ ಅವರು ಕಾಲಕಾಲಕ್ಕೆ ದಾಸ್‌ಗುಪ್ತಾ ಅವರಿಗೆ ಹಲವು ಲಕ್ಷ ರೂಪಾಯಿಗಳನ್ನು ನೀಡಿದ್ದರು. ಈ ಹಣದಿಂದ ಅವರು ಚಿನ್ನಾಭರಣ ಹಾಗೂ ಇತರ ದುಬಾರಿ ವಸ್ತುಗಳನ್ನು ಖರೀದಿಸುತ್ತಿದ್ದರು. ಅಂಥ ಹಲವು ವಸ್ತುಗಳನ್ನು ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ದಾಸ್‌ಗುಪ್ತಾ ಅವರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯವಿದ್ದು, ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಪೊಲೀಸರು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಕಸ್ಟಡಿಯನ್ನು ಡಿಸೆಂಬರ್‌ 30ರವರೆಗೆ ವಿಸ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.