ಹೈದರಾಬಾದ್: ತೆಲಂಗಾಣದ ಪಡಿತರ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರ ಕಾಣದಿರುವುದಕ್ಕೆ ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ, ಅದಕ್ಕೆ ತಿರುಗೇಟು ನೀಡಿರುವ ಟಿಆರ್‌ಎಸ್ ಕಾರ್ಯಕರ್ತರು, ಸಿಲಿಂಡರ್‌ಗಳ ಮೇಲೆ ಮೋದಿ ಚಿತ್ರದ ಜೊತೆಗೆ ಬೆಲೆಯನ್ನು ನಮೂದಿಸಿರುವ ಪೋಸ್ಟರ್ ಅಂಟಿಸಿದ್ದಾರೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ ₹1,105ಕ್ಕೆ ತಲುಪಿರುವುದನ್ನು ಉಲ್ಲೇಖಿಸಿರುವ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಪ್ರತೀ ಸಿಲಿಂಡರ್ ಬೆಲೆ ₹410 ಆಗಿತ್ತು. ಈಗ ಸಾವಿರ ದಾಟಿದೆ ಎಂದು ಟಿಆರ್‌ಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ನಿಮಗೆ ಮೋದಿಜೀಯವರ ಚಿತ್ರ ಬೇಕಲ್ಲವೇ ನಿರ್ಮಲಾ ಸೀತಾರಾಮನ್ ಜೀ?. ಇಲ್ಲಿದೆ ನೋಡಿ ಎಂದು ಟಿಆರ್‌ಎಸ್ ನಾಯಕ ಕ್ರಿಷಾಂಕ್ ಮನ್ನೆ ಸಿಲಿಂಡರ್ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.
ಪಡಿತರ ಕೇಂದ್ರಗಳಲ್ಲಿ ಮೋದಿಯವರ ಚಿತ್ರ ಹಾಕದಿದ್ದಕ್ಕೆ ಶುಕ್ರವಾರ ನಿರ್ಮಲಾ ಸೀತಾರಾಮನ್ ಅವರು, ಕಾಮರೆಡ್ಡಿ ಜಿಲ್ಲೆಯ ಡಿಸಿ ಜಿತೇಶ್ ವಿ ಪಾಟೀಲ್ ಅವರನ್ನು ಪ್ರಶ್ನಿಸಿದ್ದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕೇಂದ್ರ ಸರ್ಕಾರವು ಉಚಿತವಾಗಿ ಬಡವರಿಗಾಗಿ ಅಕ್ಕಿ ಒದಗಿಸುತ್ತಿದೆ. ಆದರೂ ಪಡಿತರ ಕೇಂದ್ರಗಳಲ್ಲಿ ಮೋದಿ ಚಿತ್ರ ಹಾಕದಿರುವುದು ಸರಿಯಲ್ಲ ಎಂದು ಬಹಿರಂಗವಾಗಿಯೇ ನಿರ್ಮಲಾ ಸೀತಾರಾಮನ್ ಅಸಮಾಧಾನ ತೋರ್ಪಡಿಸಿದ್ದರು.
ಕೇಂದ್ರದ ಲೋಕಸಭಾ ಕ್ಷೇತ್ರಗಳ ಪ್ರವಾಸ ಯೋಜನೆಯಡಿ ಅಡಿ ನಿರ್ಮಲಾ ಸೀತಾರಾಮನ್ ಅವರು, ಸೆಪ್ಟೆಂಬರ್ 1ರಿಂದ ತೆಲಂಗಾಣದ ಜಹೀರಾಬಾದ್ ಕ್ಷೇತ್ರದ ಪ್ರವಾಸ ಕೈಗೊಂಡಿದ್ದಾರೆ.
ಈ ನಡುವೆ, ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು, ಕಾಮರೆಡ್ಡಿ ಜಿಲ್ಲಾಧಿಕಾರಿ ಜೊತೆ ಕೇಂದ್ರ ಹಣಕಾಸು ಸಚಿವರ ಅಶಿಸ್ತಿನ ವರ್ತನೆಯಿಂದ ದಿಗ್ಭ್ರಮೆಗೊಂಡಿದ್ದೇನೆ ಎಂದು ಹೇಳಿದ್ದಾರೆ.
'ಪರಿಶ್ರಮವಹಿಸಿ ಕೆಲಸ ಮಾಡುವ ನಾಗರಿಕ ಸೇವಾ ಅಧಿಕಾರಿಗಳನ್ನು ನಿರ್ಮಲಾ ನಿರುತ್ಸಾಹಗೊಳಿಸುತ್ತಿದ್ದಾರೆ’ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.