ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕಾನೂನು ವಿರೋಧಿಸಿ ದೇಶದ ವಿವಿಧೆಡೆ ಪ್ರತಿಭಟನೆ ಹಮ್ಮಿಕೊಂಡಿದ್ದ ವಾಣಿಜ್ಯ ವಾಹನ, ಟ್ಯಾಂಕರ್ ಮತ್ತು ಟ್ರಕ್ ಚಾಲಕರು ಬುಧವಾರದಿಂದ ಕೆಲಸಕ್ಕೆ ಮರಳಿದ್ದಾರೆ.
ದೇಶದಲ್ಲಿ ಇನ್ನೆರಡು ದಿನಗಳಲ್ಲಿ ಸರಕು ಸಾಗಣೆ ಸೇವೆಯು ಯಥಾಸ್ಥಿತಿಗೆ ಮರಳಲಿದೆ ಎಂದು ಆಲ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ಹೇಳಿದೆ.
‘ಅಪಘಾತ ನಡೆಸಿ ಪರಾರಿ’ಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯಡಿ ನಿಗದಿಪಡಿಸಿರುವ ಶಿಕ್ಷಾರ್ಹ ಮತ್ತು ದಂಡಾರ್ಹ ನಿಯಮವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಚಾಲಕರು ಹೋರಾಟ ಹಮ್ಮಿಕೊಂಡಿದ್ದರು. ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಳಿಕ ಮಂಗಳವಾರ ಹೋರಾಟ ಅಂತ್ಯಗೊಂಡಿತ್ತು.
‘ಸಂಘಟನೆಯಿಂದ ರಾಷ್ಟ್ರ ವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿರಲಿಲ್ಲ. ಕಾನೂನು ಜಾರಿಗೂ ಮೊದಲು ಸಂಘಟನೆಗಳ ಜತೆಗೆ ಚರ್ಚಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಹಾಗಾಗಿ, ಚಾಲಕರು ಕೆಲಸಕ್ಕೆ ಮರಳುತ್ತಿದ್ದಾರೆ’ ಎಂದು ಎಐಎಂಟಿಸಿ ಪ್ರಧಾನ ಕಾರ್ಯದರ್ಶಿ ಎನ್.ಕೆ. ಗುಪ್ತ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.