ನವದೆಹಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ–ಕೆನಡಾ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಮಂಗಳವಾರ ತೀವ್ರ ಸ್ವರೂಪ ಪಡೆದುಕೊಂಡಿದೆ.
‘ಭಾರತ ಸರ್ಕಾರದ ಏಜೆಂಟ್‌ಗಳು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜತೆ ಸೇರಿಕೊಂಡು ನಮ್ಮ ನೆಲದಲ್ಲಿ ರಹಸ್ಯ ಕಾರ್ಯಾಚರಣೆಗಳನ್ನು ನಡೆಸುತ್ತಿವೆ’ ಎಂದು ಕೆನಡಾ ಮಾಡಿರುವ ಆರೋಪವನ್ನು ಭಾರತ, ಸಾರಾಸಗಟಾಗಿ ತಳ್ಳಿಹಾಕಿದೆ.
ಭಾರತವು ರಾಜತಾಂತ್ರಿಕರನ್ನು ಬಳಸಿಕೊಂಡು ಸಂಘಟಿತ ಅಪರಾಧಗಳನ್ನು ನಡೆಸುವ ಮೂಲಕ ಕೆನಡಾ ಪ್ರಜೆಗಳಿಗೆ ತವರು ನೆಲದಲ್ಲೇ ಅಸುರಕ್ಷತೆಯ ಭಾವನೆ ಮೂಡುವಂತೆ ಮಾಡುತ್ತಿದೆ ಎಂದು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ದೂರಿದ್ದಾರೆ.
‘ಬಿಷ್ಣೋಯ್ ಗ್ಯಾಂಗ್ ಜತೆ ನಂಟು’
ಒಟ್ಟಾವಾ (ಪಿಟಿಐ): ಭಾರತ ಸರ್ಕಾರದ ಏಜೆಂಟ್‌ಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜತೆ ಸೇರಿಕೊಂಡು ಕೆನಡಾದಲ್ಲಿರುವ ದಕ್ಷಿಣ ಏಷ್ಯಾದ ಸಮುದಾಯದವರನ್ನು ತಮ್ಮ ಗುರಿಯಾಗಿಸುತ್ತಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು (ಆರ್‌ಸಿಎಂಪಿ) ಆರೋಪಿಸಿದ್ದಾರೆ.
ಆರ್‌ಸಿಎಂಪಿ ಕಮಿಷನರ್ ಮೈಕ್ ಡ್ಯುಹೆಮ್ ಮತ್ತು ಡೆಪ್ಯುಟಿ ಕಮಿಷನರ್ ಬ್ರಿಜೆಟ್ ಗಾವಿನ್ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ. ಭಾರತವು ಕೆನಡಾದಲ್ಲಿರುವ ಸಿಖ್ ಸಮುದಾಯವನ್ನು ತನ್ನ ಗುರಿಯಾಗಿಸುತ್ತಿದೆಯೇ ಎಂಬ ಪ್ರಶ್ನೆಗೆ ಗಾವಿನ್, ‘ಭಾರತವು ದಕ್ಷಿಣ ಏಷ್ಯಾ ಸಮುದಾಯವನ್ನು ಅದರಲ್ಲೂ ಮುಖ್ಯವಾಗಿ ಖಾಲಿಸ್ತಾನಿ ಪರ ಹೋರಾಟಗಾರರನ್ನು ಗುರಿಯಾಗಿಸುತ್ತಿದೆ’ ಎಂದು ಹೇಳಿದರು.
‘ಸಂಘಟಿತ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡವರನ್ನು ಭಾರತ ಸರ್ಕಾರದ ಏಜೆಂಟ್‌ಗಳು ಬಳಸಿಕೊಳ್ಳುತ್ತಿರುವುದು ಆರ್‌ಸಿಎಂಪಿ ಗಮನಕ್ಕೆ ಬಂದಿದೆ’ ಎಂದು ತಿಳಿಸಿದರು.
‘ಬಿಷ್ಣೋಯ್ ಗ್ಯಾಂಗ್‌ನವರು ಕೆನಡಾದಲ್ಲಿ ಸಂಘಟಿಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಆ ಗ್ಯಾಂಗ್‌ನವರು ಭಾರತ ಸರ್ಕಾರದ ಏಜೆಂಟ್‌ಗಳ ಜತೆ ನಂಟು ಹೊಂದಿರುವುದಾಗಿ ನಾವು ನಂಬುತ್ತೇವೆ’ ಎಂದು ಹೇಳಿದರು.
ಈ ಆರೋಪವನ್ನು ಭಾರತ ಅಲ್ಲಗಳೆದಿದೆ.
ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗಿನ ಬೆಳವಣಿಗೆ ಗಳಿಂದ ಭಾರತ–ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಹತ್ಯೆ ಪ್ರಕರಣದಲ್ಲಿ ಭಾರತದ ಹೈಕಮಿಷನರ್ ಹಾಗೂ ಇತರ ರಾಜತಾಂತ್ರಿಕರನ್ನು ತನಿಖೆಗೆ ಒಳಪಡಿಸುವುದಾಗಿ ಕೆನಡಾ, ಭಾನುವಾರ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಭಾರತವು, ಕೆನಡಾದಲ್ಲಿರುವ ತನ್ನ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರನ್ನು ವಾಪಸ್ ಕರೆಸಿಕೊಂಡಿತ್ತು.
ಕೆನಡಾ ಸರ್ಕಾರವು ಭಾರತದ ಆರು ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶ ತೊರೆಯುವಂತೆ ಸೂಚಿಸಿದರೆ, ಅದಕ್ಕೆ ಪ್ರತಿಯಾಗಿ ಭಾರತ ಕೂಡಾ ಕೆನಡಾದ ಆರು ರಾಜತಾಂತ್ರಿಕರಿಗೆ ಅಕ್ಟೋಬರ್ 19ರ ಒಳಗಾಗಿ ದೇಶ ಬಿಟ್ಟು ಹೋಗುವಂತೆ ಸೂಚಿಸಿತ್ತು.
ಟ್ರುಡೊ ಗಂಭೀರ ಆರೋಪ: ಭಾರತದ ಏಜೆಂಟರು ಕೆನಡಾದಲ್ಲಿ ‘ಹಿಂಸೆಗೆ ಕುಮ್ಮಕ್ಕು’ ನೀಡುತ್ತಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು (ಆರ್‌ಸಿಎಂಪಿ) ಸೋಮವಾರ ಆರೋಪಿಸಿದ್ದಾರೆ. ಅದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಟ್ರುಡೊ ಭಾರತದ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.
‘ಭಾರತವು ತನ್ನ ರಾಜತಾಂತ್ರಿಕ ರನ್ನು ಬಳಸಿಕೊಂಡು ಸಂಘಟಿತ ಅಪರಾಧಗಳ ಮೂಲಕ ಕೆನಡಾ ಪ್ರಜೆಗಳ ಮೇಲೆ ದಾಳಿ ಮಾಡುತ್ತಿದೆ. ಹಿಂಸೆ ಹರಡುವುದಲ್ಲದೆ, ಕೊಲೆ ಕೃತ್ಯಗಳನ್ನೂ ನಡೆಸಿ ಇಲ್ಲಿನ ಜನರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿದೆ. ಇಂತಹ ಕೃತ್ಯಗಳ ಮೂಲಕ ಭಾರತ ಬಹುದೊಡ್ಡ ತಪ್ಪು ಮಾಡಿದೆ. ಇದನ್ನು ಒಪ್ಪಲಾಗದು’ ಎಂದಿದ್ದಾರೆ. ‘ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅಮೆರಿಕ ಒಳಗೊಂಡಂತೆ ನಮ್ಮ ಐದು ಮಿತ್ರ ರಾಷ್ಟ್ರಗಳೊಂದಿಗೆ ಹಂಚಿಕೊಂಡಿದ್ದೇವೆ. ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಕೂಡಾ ಭಾರತದಿಂದ ಇದೇ ರೀತಿಯ ವರ್ತನೆಯನ್ನು ಎದುರಿಸಬೇಕಾಗಿ ಬಂದಿತ್ತು’ ಎಂದಿದ್ದಾರೆ.
ಆದರೆ, ಭಾರತ– ಕೆನಡಾ ನಡುವಣ ಉದ್ಭವಿಸಿರುವ ರಾಜತಾಂತ್ರಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಮೆರಿಕ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ರುಡೊ ಅವರು ಈ ಬೆಳವಣಿಗೆಗಳ ಬಗ್ಗೆ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರ ಜತೆ ಚರ್ಚಿಸಿದ್ದಾರೆ.
ಭಾರತ ತಿರುಗೇಟು:
‘ಕೆನಡಾ ಪ್ರಧಾನಿ ಅವರು ಪತ್ರಿಕಾಗೋಷ್ಠಿಯಲ್ಲಿ ಅದೇ ಹಳೆಯ ವಿಷಯಗಳು ಮತ್ತು ಹಳೆಯ ಕಾರಣಗಳನ್ನು ಹೇಳಿದ್ದಾರೆ’ ಎಂದು ಭಾರತ ತಿರುಗೇಟು ನೀಡಿದೆ.
‘ಭಾರತ ಕೇಳಿರುವ ಎಲ್ಲ ಪುರಾವೆಗಳನ್ನು ನೀಡಲಾಗಿದೆ ಎಂದು ಕೆನಡಾ ಅಧಿಕಾರಿಗಳು ಹೇಳಿದ್ದಾರೆ. ನವದೆಹಲಿಯಲ್ಲಿರುವ ಕೆನಡಾ ಡೆಪ್ಯುಟಿ ಹೈಕಮಿಷನರ್ ಸ್ಟಿವರ್ಟ್ ವೀಲರ್ಸ್ ಅವರೂ ಮಾಧ್ಯಮಗಳ ಮುಂದೆ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಆದರೆ, ಕೆನಡಾ ಇದುವರೆಗೂ ಪುರಾವೆ ಒದಗಿಸಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಅಸ್ಪಷ್ಟ ಆರೋಪಗಳನ್ನು ಮಾಡಿ, ಅದನ್ನು ನಿರಾಕರಿ ಸುವ ಹೊರೆಯನ್ನು ಭಾರತದ ಮೇಲೆ ಹಾಕುವ ಕೆಲಸವನ್ನು ಕೆನಡಾ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ’ ಎಂದಿದೆ.
‘ಬಿಷ್ಣೋಯಿ ಗ್ಯಾಂಗ್ ಜತೆ ನಂಟು’
ಒಟ್ಟಾವಾ (ಪಿಟಿಐ): ಭಾರತ ಸರ್ಕಾರದ ಏಜೆಂಟ್‌ಗಳು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜತೆ ಸೇರಿಕೊಂಡು ಕೆನಡಾದಲ್ಲಿರುವ ದಕ್ಷಿಣ ಏಷ್ಯಾದ ಸಮುದಾಯದವರನ್ನು ತಮ್ಮ ಗುರಿಯಾಗಿಸುತ್ತಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು (ಆರ್‌ಸಿಎಂಪಿ) ಆರೋಪಿಸಿದ್ದಾರೆ.
ಆರ್‌ಸಿಎಂಪಿ ಕಮಿಷನರ್ ಮೈಕ್ ಡ್ಯುಹೆಮ್ ಮತ್ತು ಡೆಪ್ಯುಟಿ ಕಮಿಷನರ್ ಬ್ರಿಜೆಟ್ ಗಾವಿನ್ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ. ಭಾರತವು ಕೆನಡಾದಲ್ಲಿರುವ ಸಿಖ್ ಸಮುದಾಯವನ್ನು ತನ್ನ ಗುರಿಯಾಗಿಸುತ್ತಿದೆಯೇ ಎಂಬ ಪ್ರಶ್ನೆಗೆ ಗಾವಿನ್, ‘ಭಾರತವು ದಕ್ಷಿಣ ಏಷ್ಯಾ ಸಮುದಾಯವನ್ನು ಅದರಲ್ಲೂ ಮುಖ್ಯವಾಗಿ ಖಾಲಿಸ್ತಾನಿ ಪರ ಹೋರಾಟಗಾರರನ್ನು ಗುರಿಯಾಗಿಸುತ್ತಿದೆ’ ಎಂದು ಹೇಳಿದರು. ‘ಸಂಘಟಿತ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡವರನ್ನು ಭಾರತ ಸರ್ಕಾರದ ಏಜೆಂಟ್‌ಗಳು ಬಳಸಿಕೊಳ್ಳುತ್ತಿರುವುದು ಆರ್‌ಸಿಎಂಪಿ ಗಮನಕ್ಕೆ ಬಂದಿದೆ’ ಎಂದು ತಿಳಿಸಿದರು.
‘ಬಿಷ್ಣೋಯಿ ಗ್ಯಾಂಗ್‌ನವರು ಕೆನಡಾದಲ್ಲಿ ಸಂಘಟಿತ ಅಪರಾಧ ಚಟುವಟಿಕೆ ಗಳಲ್ಲಿ ತೊಡಗಿಕೊಂಡಿದೆ. ಆ ಗ್ಯಾಂಗ್‌ನವರು ಭಾರತ ಸರ್ಕಾರದ ಏಜೆಂಟ್‌ಗಳ ಜತೆ ನಂಟು ಹೊಂದಿರುವುದಾಗಿ ನಾವು ನಂಬುತ್ತೇವೆ’ ಎಂದು ಹೇಳಿದರು.
ನಿರ್ಬಂಧ: ಕೆನಡಾ ಚಿಂತನೆ
ಈಗ ತಲೆದೋರಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ನಿರ್ಬಂಧ ಹೇರುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿರುವ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ‘ಎಲ್ಲ ಆಯ್ಕೆಗಳೂ ನಮ್ಮ ಮುಂದಿವೆ’ ಎಂದಿದ್ದಾರೆ. ‘ಕೆನಡಾ ಪೊಲೀಸರು ಕಲೆಹಾಕಿರುವ ಸಾಕ್ಷ್ಯಗಳ ಆಧಾರದಲ್ಲಿ ಭಾರತದ ರಾಜತಾಂತ್ರಿಕರನ್ನು ಗಡೀಪಾರು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನಾವು ಭಾರತದೊಂದಿಗೆ ರಾಜತಾಂತ್ರಿಕ ಸಂಘರ್ಷವನ್ನು ಬಯಸುವುದಿಲ್ಲ. ಪ್ರತಿ ವರ್ಷ ಕೆನಡಾದ ಸಾವಿರಾರು ಮಂದಿ ಭಾರತಕ್ಕೆ ಹೋಗುತ್ತಾರೆ ಎಂಬುದು ನಮಗೆ ತಿಳಿದಿದೆ. ಭಾರತದಿಂದ ಸಾಕಷ್ಟು ಜನರು ಕೆನಡಾಕ್ಕೂ ಬರುವರು. ಎರಡೂ ದೇಶಗಳ ಜನರ ನಡುವೆ ಆಳವಾದ ಸಂಬಂಧವಿದೆ. ನಿಜ್ಜರ್ ಹತ್ಯೆ ಪ್ರಕರಣದ ತನಿಖೆಗೆ ಸಹಕರಿಸುವಂತೆ ಭಾರತವನ್ನು ಕೇಳುತ್ತಲೇ ಇರುತ್ತೇವೆ. ಏಕೆಂದರೆ ಈ ಪ್ರಕರಣದ ಸತ್ಯ ಹೊರಬರಬೇಕಿರುವುದು ಎರಡೂ ದೇಶಗಳ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.