ನವದೆಹಲಿ: ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದು ‘ಸತ್ಯಕ್ಕೆ ಸಂದ ಜಯ’ ಎಂದು ಆಮ್ ಆದ್ಮಿ ಪಕ್ಷವು (ಎಎಪಿ) ಶುಕ್ರವಾರ ಹೇಳಿದೆ.
ಇದೇ ವೇಳೆ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರ ನಾಯಕರಿಗೂ ಶೀಘ್ರವೇ ನ್ಯಾಯ ದೊರಕುವ ಭರವಸೆ ಇದೆ ಎಂದು ಹೇಳಿತು.
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ, ಎಎಪಿ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಸಿಹಿ ಹಂಚಿ ಮತ್ತು ಡೋಲು ಬಾರಿಸುವ ಮೂಲಕ ಪಕ್ಷದ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದರು.
ಎಎಪಿ ಸಂಸದ ರಾಘವ್ ಛಡ್ಡಾ ಅವರು ಎಕ್ಸ್‌ನಲ್ಲಿ, ‘ದೆಹಲಿ ಶಿಕ್ಷಣ ಕ್ರಾಂತಿಯ ಹೀರೊ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಲಭ್ಯವಾಗಿದ್ದಕ್ಕೆ ಇಡೀ ದೇಶಕ್ಕೆ ಸಂತಸವಾಗಿದೆ. ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
‘ಬಡ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಿದ ‘ಅಪರಾಧ’ಕ್ಕಾಗಿ ಅವರನ್ನು 530 ದಿನ ಜೈಲಿನಲ್ಲಿ ಇಡಲಾಗಿತ್ತು. ಪ್ರೀತಿಯ ಮಕ್ಕಳೇ..ನಿಮ್ಮ ಅಂಕಲ್ ವಾಪಸ್ ಬರುತ್ತಿದ್ದಾರೆ’ ಎಂದಿದ್ದಾರೆ.
ಸರ್ವಾಧಿಕಾರಕ್ಕೆ ಕಪಾಳಮೋಕ್ಷ:
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ‘ಈ ಆದೇಶವು ಕೇಂದ್ರದ ಸರ್ವಾಧಿಕಾರಕ್ಕೆ ನೀಡಿದ ಕಪಾಳಮೋಕ್ಷ’ ಎಂದು ಹೇಳಿದರು.
‘ಬಿಜೆಪಿಯು ದ್ವೇಷ ಮತ್ತು ಹಗೆತನದ ರಾಜಕೀಯದಲ್ಲಿ ಮುಳುಗಿದೆ. ಇದೇ ಕಾರಣದಿಂದಾಗಿ ಎಎಪಿ ನಾಯಕರು ಜೈಲಿನಲ್ಲಿದ್ದಾರೆ. ಸಿಸೋಡಿಯಾ ಅವರಿಗೆ ಲಭ್ಯವಾಗಿರುವ ಜಾಮೀನು ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ’ ಎಂದರು.
‘ಸಿಸೋಡಿಯಾ ಅವರು 17 ತಿಂಗಳು ಜೈಲಿನಲ್ಲಿ ಕಾಲ ಕಳೆದಿದ್ದಕ್ಕೆ ಮತ್ತು ಅವರ ಕುಟುಂಬದ ನೋವಿಗೆ ಯಾರು ಉತ್ತರದಾಯಿ’ ಎಂದು ಪ್ರಶ್ನಿಸಿದರು.
‘ಪ್ರಧಾನ ಮಂತ್ರಿ ಅವರು ರಾಜಕೀಯ ನಾಯಕರನ್ನು ಜೈಲಿಗೆ ಅಟ್ಟುವ ರಾಜಕಾರಣಕ್ಕೆ ಕೂಡಲೇ ಅಂತ್ಯಹಾಡಬೇಕು’ ಎಂದು ಆಗ್ರಹಿಸಿದರು.
‘ಸಿಸೋಡಿಯಾ ಅವರಿಗೆ ಜಾಮೀನು ಸಿಕ್ಕ ನಂತರ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮವನ್ನು ಕಾಣಬಹುದು. ಜೈಲಿನಲ್ಲಿರುವ ಅರವಿಂದ ಕೇಜ್ರಿವಾಲ್, ಸತ್ಯೇಂದ್ರ ಜೈನ್ ಅವರಿಗೂ ಶೀಘ್ರ ಜಾಮೀನು ಮತ್ತು ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.
ಎಎಪಿ ದೆಹಲಿ ರಾಜ್ಯ ಸಂಚಾಲಕ ಗೋಪಾಲ್ ರಾಯ್, ‘ಜನರ ಪ್ರಾರ್ಥನೆ ಕೊನೆಗೂ ಫಲಿಸಿದೆ. ಸಿಸೋಡಿಯಾ ಅವರು ದೆಹಲಿ ಶಿಕ್ಷಣ ಕ್ರಾಂತಿಯ ಹರಿಕಾರರು. ಶಿಕ್ಷಣ ವ್ಯವಸ್ಥೆಯಲ್ಲಿ ಅವರು ತಂದಿದ್ದ ಬದಲಾವಣೆಗಳನ್ನು ಹಾಳು ಮಾಡಲು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಬಯಸಿತ್ತು. ಒಂದು ವರ್ಷದ ಹಿಂದೆಯೇ ಅವರಿಗೆ ಜಾಮೀನು ಸಿಗಬೇಕಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವಕ್ಕೆ ಸಂದ ಜಯ. ಅನ್ಯಾಯ ಮತ್ತು ಸರ್ವಾಧಿಕಾರಕ್ಕೆ ಉಂಟಾದ ಸೋಲು. ಸಿಸೋಡಿಯಾ ಅವರ ಹೋರಾಟ ಇತಿಹಾಸವಾಗಲಿದೆ ಮತ್ತು ಭವಿಷ್ಯದ ಪೀಳಿಗೆಗಳಿಗೆ ಸ್ಫೂರ್ತಿಯಾಗಲಿದೆ-ಹೇಮಂತ್ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿ
ಕಣ್ಣೀರು ಹಾಕಿದ ಆತಿಶಿ
‘ಸುಪ್ರೀಂ’ ತೀರ್ಪು ಹೊರಬರುತ್ತಿದ್ದಂತೆಯೇ ದೆಹಲಿ ಶಿಕ್ಷಣ ಸಚಿವೆ ಆತಿಶಿ ಅವರು ‘ಎಕ್ಸ್’ನಲ್ಲಿ ‘ಸತ್ಯ ಮೇವ ಜಯತೇ’ ಎಂದು ಬರೆದುಕೊಂಡಿದ್ದಾರೆ. ನಂತರ ದ್ವಾರಕದಲ್ಲಿ ಶಾಲೆಯೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ವೇದಿಕೆಯ ಮೇಲೆಯೇ ಸಿಸೋಡಿಯ ಅವರನ್ನು ನೆನೆದು ಕಣ್ಣೀರು ಹಾಕಿದರು. ‘ಸುಳ್ಳು ಪ್ರಕರಣ ದಾಖಲಿಸಿ ಅವರನ್ನು 17 ತಿಂಗಳು ಜೈಲಿನಲ್ಲಿ ಇಟ್ಟರು. ಈ ಶಾಲೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ ಸಿಸೋಡಿಯಾ ಅವರು ಅದರ ಉದ್ಘಾಟನೆ ದಿನವೇ ಜಾಮೀನು ಪಡೆದಿದ್ದಾರೆ. ದೆಹಲಿಯಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣರಾದ ಸಿಸೋಡಿಯಾ ಅವರಿಗೆ ಜಾಮೀನು ಲಭ್ಯವಾಗಿದೆ. ಇದು ಸತ್ಯಕ್ಕೆ ಸಂದ ಜಯ. ಶಿಕ್ಷಣ ಗೆದ್ದಿದೆ ಮಕ್ಕಳು ಗೆದ್ದಿದ್ದಾರೆ’ ಎಂದು ಹೇಳಿದರು.
ದೋಷಮುಕ್ತ ಮಾಡಿಲ್ಲ: ಬಿಜೆಪಿ ಸಂಸದ
ನವದೆಹಲಿ: ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದು ಕಾನೂನು ಪ್ರಕ್ರಿಯೆಗೆ ಸಂಬಂಧಿಸಿದ ತೀರ್ಪು. ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿಲ್ಲ ಎಂದು ಬಿಜೆಪಿ ಸಂಸದ ಬಾಂಸುರಿ ಸ್ವರಾಜ್ ಅವರು ಶುಕ್ರವಾರ ಹೇಳಿದರು. ಬಿಜೆಪಿ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ‘ವಿಚಾರಣೆಯು ವಿಳಂಬವಾಗುತ್ತಿದೆ ಎಂಬ ಮನವಿ ಆಧರಿಸಿ ಜಾಮೀನು ಮಂಜೂರು ಮಾಡಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಬಿ.ಆರ್ ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ನ್ಯಾಯಪೀಠವು ‘ಸಿಸೋಡಿಯಾ ಅವರು 17 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಇದು ತ್ವರಿತ ವಿಚಾರಣೆಯ ಹಕ್ಕನ್ನು ಅವರಿಂದ ಕಸಿದುಕೊಂಡಂತೆ’ ಎಂದು ಹೇಳಿತು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.