ತಿರುಪತಿ: ತಿರುಪತಿ ತಿರುಮಲ ದೇವಸ್ಥಾನಗಳ ವಿವಿಧ ಯೋಜನೆಗಳಿಗೆ ಟಿಟಿಡಿಯು ಅಂದಾಜು ₹ 300 ಕೋಟಿ ವಿನಿಯೋಗಿಲಿಸದೆ ಎಂದು ಟಿಟಿಡಿ ಟ್ರಸ್ಟ್‌ನ ನಿರ್ಗಮಿತ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಸೋಮವಾರ ತಿಳಿಸಿದ್ದಾರೆ.
ತಿರುಪತಿಯಲ್ಲಿ ನಿರ್ಮಿಸಲಾಗುತ್ತಿರುವ ‘ಶ್ರೀ ಪದ್ಮಾವತಿ ಮಕ್ಕಳ ಹೃದಯ ಕೇಂದ್ರಕ್ಕೆ’ ₹ 76 ಕೋಟಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಲಾಗುತ್ತದೆ ಎಂದು ರೆಡ್ಡಿ ಅವರು ತಮ್ಮ ಅಧ್ಯಕ್ಷತೆಯ ಕೊನೆಯ ಸಭೆಯಲ್ಲಿ ಹೇಳಿದ್ದಾರೆ.
ಎರಡೂ ಘಾಟ್ ರಸ್ತೆಗಳ ಬದಿಯಲ್ಲಿ ರಕ್ಷಣಾ ಗೋಡೆಗಳನ್ನು ನಿರ್ಮಿಸಲು ₹ 24 ಕೋಟಿ ವ್ಯಯಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿರುಮಲದ ವೈಕುಂಠಂ ‘ಕ್ಯೂ ಕಾಂಪ್ಲೆಕ್ಸ್’ ನಂತೆಯೇ ತಿರುಚನೂರಿನಲ್ಲಿ ಭಕ್ತರಿಗಾಗಿ ‘ಕ್ಯೂ ಕಾಂಪ್ಲೆಕ್ಸ್’ ನಿರ್ಮಿಸಲು ₹ 23.5 ಕೋಟಿ, ಎಸ್.ವಿ. ಆಯರ್ವೇದಿಕ್ ಆಸ್ಪತ್ರೆಗೆ ಹೆಚ್ಚುವರಿ ಮಹಡಿ ನಿರ್ಮಾಣಕ್ಕೆ ₹ 14 ಕೋಟಿ ಹಾಗೂ ಆಯುರ್ವೇದ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ನಲ್ಲಿ ಎರಡು ಹೆಚ್ಚುವರಿ ಮಹಡಿ ನಿರ್ಮಿಸಲು ₹ 3 ಕೋಟಿ ವಿನಿಯೋಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಎಸ್.ವಿ. ಸಂಗೀತ ಮತ್ತು ನೃತ್ಯ ಕಾಲೇಜಿನಲ್ಲಿ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕೆ ₹ 11 ಕೋಟಿ, ಶ್ರೀವಾಣಿ ಟ್ರಸ್ಟ್ ನಿಧಿಯೊಂದಿಗೆ ವಕುಳಮಾತಾ ದೇವಾಲಯದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ₹ 10 ಕೋಟಿ ವೆಚ್ಚ ಮಾಡಲಾಗುವುದು.
ಶ್ರೀವಾಣಿ ಟ್ರಸ್ಟ್ ನಿಧಿಯಡಿ ನಡೆಯುತ್ತಿರುವ 26 ದೇವಾಲಯಗಳ ನಿರ್ಮಾಣ ಕಾರ್ಯ ಸೇರಿದಂತೆ ಶ್ರೀನಿವಾಸ ಸೇತು ಕಾಮಗಾರಿ ಹಾಗೂ ಯೋಜನೆಗಳಿಗೆ ಕೊನೆಯ ಹಂತವಾಗಿ ₹ 119 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಟಿಟಿಡಿ ಅಧ್ಯಕ್ಷರಾಗಿ ಸುಬ್ಬಾ ರೆಡ್ಡಿ ಅವರು ಸತತ ಎರಡನೇ ಅವಧಿ ಪೂರ್ಣಗೊಳಿಸುತ್ತಿದ್ದು, ಅವರ ಬಳಿಕ ವೈಎಸ್‌ಆರ್‌ಸಿಪಿ ನಾಯಕ ಮತ್ತು ತಿರುಪತಿ ಶಾಸಕ ಭೂಮನ ಕರುಣಾಕರ ರೆಡ್ಡಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.