ಹೈದರಾಬಾದ್: ತಿರುಮಲದಲ್ಲಿ ಕೆಲಸ ಮಾಡುವ ಹಿಂದೂಯೇತರ ಸಿಬ್ಬಂದಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರಿ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ನಿರ್ಧರಿಸಿದೆ.
ಸೋಮವಾರ ನಡೆದ ಟಿಟಿಡಿಯ ಹೊಸ ಮಂಡಳಿಯ ಮೊದಲ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
‘ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿರಬೇಕು. ಟಿಟಿಡಿಯು ಹಿಂದೂ ದತ್ತಿ ಸಂಸ್ಥೆಯಾಗಿರುವುದರಿಂದ ಹಿಂದೂಯೇತರರು ಸಿಬ್ಬಂದಿಯಾಗಿ ಮುಂದುವರಿಯಲು ಅವಕಾಶ ನೀಡುವುದಿಲ್ಲ’ ಎಂದು ಟಿಟಿಡಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಿ.ಆರ್.ನಾಯ್ಡು ಈ ಹಿಂದೆ ಘೋಷಿಸಿದ್ದರು.
‘ಇತರ ಧರ್ಮಕ್ಕೆ ಸೇರಿದ ಸಿಬ್ಬಂದಿಯನ್ನು ಸರ್ಕಾರದ ಇತರ ಇಲಾಖೆಗಳಿಗೆ ನಿಯುಕ್ತಿಗೊಳಿಸುವ ಅಥವಾ ಸ್ವಯಂ ನಿವೃತ್ತಿಗೆ (ವಿಆರ್‌ಎಸ್) ಅವಕಾಶ ಕಲ್ಪಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು’ ಎಂದಿದ್ದರು. ಆದ್ದರಿಂದ ತನ್ನ ಮೊದಲ ಸಭೆಯಲ್ಲೇ ಈ ವಿಷಯದ ಬಗ್ಗೆ ಚರ್ಚೆ ನಡೆಸಿದೆ.
‘ತಿರುಮಲದಲ್ಲಿ ಯಾವುದೇ ರೀತಿಯ ರಾಜಕೀಯ ಹೇಳಿಕೆಗಳಿಗೆ ಅವಕಾಶ ನೀಡುವುದಿಲ್ಲ. ಅಂತಹ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವವರ ವಿರುದ್ಧ ಅಗತ್ಯಬಿದ್ದರೆ ಕಾನೂನುಬದ್ಧವಾಗಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನಾಯ್ಡು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.