ಉತ್ತರಕಾಶಿ (ಉತ್ತರಾಖಂಡ): ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದ್ದು, ರಕ್ಷಣಾ ಸಿಬ್ಬಂದಿ ಸೋಮವಾರ ಆರು ಇಂಚು ವ್ಯಾಸದ ಪೈಪ್ ಅನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಗತಿ ಸಾಧಿಸಲಾಗಿದ್ದು, ಒಳಸಿಲುಕಿರುವ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದ ಆಹಾರ ಮತ್ತು ಇತರೆ ಅಗತ್ಯ ವಸ್ತುಗಳನ್ನು ಪೂರೈಸಲು ಇದು ಅನುವು ಮಾಡಿಕೊಡಲಿದೆ.
ಈ ಮೊದಲು ಡ್ರೈ ಫ್ರೂಟ್, ಔಷಧ ಮತ್ತು ಆಮ್ಲಜನಕ, ಆಹಾರವನ್ನು ಪೂರೈಸಲು ನಾಲ್ಕು ಇಂಚಿನ ಟ್ಯೂಬ್ ಅನ್ನು ಬಳಸಲಾಗುತ್ತಿತ್ತು. ಹೊಸ ಪೈಪ್ ಲೈನ್ ನಲ್ಲಿ ಕಾರ್ಮಿಕರಿಗೆ ರೊಟ್ಟಿ ಮತ್ತು ಪಲ್ಯದಂತಹ ಆಹಾರ ಪದಾರ್ಥ ಕಳುಹಿಸಬಹುದಾಗಿದೆ.
ಸುರಂಗ ಕುಸಿದು ಒಂಬತ್ತು ದಿನವಾಗಿದೆ. ರಕ್ಷಣಾ ಕಾರ್ಯಕರ್ತರು ಕಾರ್ಮಿಕರೊಂದಿಗೆ ರೇಡಿಯೊ ಮೂಲಕ ಸಂವಹನ ನಡೆಸುತ್ತಿದ್ದು, ಆಹಾರ, ನೀರು, ಆಮ್ಲಜನಕ ಮತ್ತು ಔಷಧಿಗಳನ್ನು ಕಿರಿದಾದ ಪೈಪ್ ಮೂಲಕ ರವಾನಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಎನ್ಎಚ್ಐಡಿಸಿಎಲ್) ನಿರ್ದೇಶಕ ಅಂಶು ಮನೀಶ್ ಕಲ್ಖೋ, ‘ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಗತಿ ಸಾಧಿಸಿದ್ದು, ಪೈಪ್ ಅನ್ನು ಅವಶೇಷಗಳ ಇನ್ನೊಂದು ಬದಿಗೆ 53 ಮೀಟರ್‌ವರೆಗೆ ಅಳವಡಿಸಲಾಗಿದೆ. ಕಾರ್ಮಿಕರು ನಮ್ಮ ಧ್ವನಿ ಕೇಳಬಹುದು. ನಾವು ಈಗ ಆ ಪೈಪ್ ಮೂಲಕ ಕಾರ್ಮಿಕರಿಗೆ ಆಹಾರ ಮತ್ತು ವೈದ್ಯಕೀಯ ಸಾಮಗ್ರಿ ಒದಗಿಸುತ್ತೇವೆ’ ಎಂದು ಹೇಳಿದ್ದಾರೆ.
ಈ ನಡುವೆ ಕಾರ್ಮಿಕರ ರಕ್ಷಣೆಗಾಗಿ ಅಂತರರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಘಟನಾ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಈವರೆಗೂ ಮಾಡಿರುವ ರಕ್ಷಣಾ ಪ್ರಯತ್ನಗಳ ಬಗ್ಗೆಯೂ ಅವರು ತೃಪ್ತಿ ವ್ಯಕ್ತಪಡಿಸಿದರು.
‘ನಾನು ಈಗಷ್ಟೇ ಸುರಂಗದಲ್ಲಿ ಇಳಿದಿದ್ದೇನೆ. ಇತರ ಆಯ್ಕೆಗಳನ್ನು ಪರಿಗಣಿಸಲು ನಾವು ಪರ್ವತದ ತುದಿಗೆ ಬರುತ್ತಿದ್ದೇವೆ. ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಜೀವಂತವಾಗಿ ಹೊರಬರುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ’ ಎಂದು ಡಿಕ್ಸ್ ಹೇಳಿದರು.
ರಕ್ಷಣಾ ಕಾರ್ಯಾಚರಣೆ ಎಷ್ಟು ಕಾಲ ನಡೆಯಲಿದೆ ಎಂಬುದರ ಬಗ್ಗೆ ಅವರು ತಿಳಿಸಲಿಲ್ಲ. ಅವರು ಇಂಟರ್‌ನ್ಯಾಷನಲ್ ಟನೆಲಿಂಗ್ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಷನ್‌ನ ಮುಖ್ಯಸ್ಥರಾಗಿದ್ದಾರೆ.
ವೈದ್ಯಕೀಯ ತಂಡಗಳನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿದೆ. ಪ್ರಧಾನಿ ಕಚೇರಿಯ (ಪಿಎಂಒ) ತಂಡವು ಕಾರ್ಯಾಚರಣೆಯ ನಿಗಾವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಚಾರ್‌ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಸುರಂಗ ನಿರ್ಮಿಸುತ್ತಿದ್ದ ವೇಳೆ ಭೂಕುಸಿತ ಸಂಭವಿಸಿ ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದಾರೆ.
ಮೋದಿ–ಧಾಮಿ ಮಾತುಕತೆ
ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. ಕಾರ್ಮಿಕರ ನೈತಿಕ ಸ್ಥೈರ್ಯ ಹೆಚ್ಚಿಸುವ ಅಗತ್ಯದ ಬಗ್ಗೆ ಪ್ರಧಾನಿ ಹೇಳಿದರು. ಅಗತ್ಯ ರಕ್ಷಣಾ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಕೇಂದ್ರ ಒದಗಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಪರಸ್ಪರ ಸಮನ್ವಯದ ಮೂಲಕ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮೋದಿ ಅವರು ಧಾಮಿ ಅವರೊಂದಿಗೆ ಮೂರನೇ ಬಾರಿಗೆ ಮಾತನಾಡಿದರು. ‘ಎಲ್ಲಾ ಕಾರ್ಮಿಕರು ಸುರಕ್ಷಿತರಾಗಿದ್ದಾರೆ. ಆಮ್ಲಜನಕ ಪೌಷ್ಟಿಕ ಆಹಾರ ಮತ್ತು ನೀರನ್ನು ನಿರಂತರವಾಗಿ ಪೂರೈಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಲಾಗಿದೆ. ಎಲ್ಲಾ ಏಜೆನ್ಸಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ನಾನು ಸ್ಥಳ ಪರಿಶೀಲನೆ ನಡೆಸಿದ್ದು ಕಾರ್ಯಾಚರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ’ ಎಂದು ಧಾಮಿ ಅವರು ಮೋದಿಗೆ ತಿಳಿಸಿದರು.
ಕಾರ್ಮಿಕರ ಸಂಬಂಧಿಕರ ಪ್ರಯಾಣ ವೆಚ್ಚ ಭರಿಸಿದ ಸರ್ಕಾರ
ಡೆಹ್ರಾಡೂನ್: ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಸಂಬಂಧಿಕರ ಪ್ರಯಾಣ ಆಹಾರ ಮತ್ತು ವಸತಿ ವೆಚ್ಚವನ್ನು ಉತ್ತರಾಖಂಡ ಸರ್ಕಾರ ಭರಿಸಲಿದೆ. ಕಾರ್ಮಿಕರನ್ನು ಶೀಘ್ರದಲ್ಲೇ ರಕ್ಷಿಸಲಾಗುವುದು ಎಂದು ಅವರ ಕುಟುಂಬದವರಿಗೆ ಭರವಸೆ ನೀಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಾರ್ಮಿಕರ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿಲ್ಕ್ಯಾರಾಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಲು ಬಯಸುವ ಜನರ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಹೇಳಿದರು. ಕಾರ್ಮಿಕರ ನೈತಿಕ ಸ್ಥೈರ್ಯ ಕಾಪಾಡಲು ಮನೋವೈದ್ಯರನ್ನು ಸಹ ನೇಮಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.