ಅಹಮದಾಬಾದ್: ಇಲ್ಲಿನ ಸಾಬರಮತಿ ಆಶ್ರಮದ ಉದ್ದೇಶಿತ ಪುನರ್ ಅಭಿವೃದ್ಧಿಯನ್ನು ವಿರೋಧಿಸಿ ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ಸಾರ್ವಜನಿಕಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
ದೀಪಾವಳಿ ರಜೆಯ ನಂತರ ಹೈಕೋರ್ಟ್‌ನಲ್ಲಿ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
‘ಪುನರ್ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಅತಿಯಾದ ಪಾಲ್ಗೊಳ್ಳುವಿಕೆ ಕಂಡು ಬರುತ್ತಿದೆ. ಹಾಗೂ ಅನೇಕ ವರ್ಷಗಳಿಂದ ಹಲವು ಸಂಘಟನೆಗಳಿಂದ ಸಂರಕ್ಷಿಸಲಾಗಿರುವ ಈ ಆಶ್ರಮದ ಸ್ವರೂಪವೇ ಬದಲಾದಲ್ಲಿ, ಗಾಂಧೀಜಿ ಅವರತತ್ವಾದರ್ಶಗಳು ಮಹತ್ವ ಕಳೆದುಕೊಳ್ಳಬಹುದು’ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಆಶ್ರಮದ ಪುನರ್ ಅಭಿವೃದ್ಧಿ ಯೋಜನೆಯಿಂದ ಗಾಂಧೀಜಿಯವರ ಕಲ್ಪನೆ, ಆಶ್ರಮದ ಸ್ವಾಯತ್ತತೆ ಹಾಗೂ ಸ್ಥಾಪನೆಯ ಉದ್ದೇಶಕ್ಕೆ ಯಾವ ರೀತಿ ಧಕ್ಕೆಯಾಗಲಿದೆ ಎಂಬುದರ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಅಲ್ಲದೆ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ ಬಳಿಕವೇ ಪಿಐಎಲ್ ಸಲ್ಲಿಸಲಾಗಿದೆ ಎಂದು 61 ವರ್ಷ ವಯಸ್ಸಿನತುಷಾರ್ ಗಾಂಧಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಗುಜರಾತ್ ಸರ್ಕಾರ, ನವದೆಹಲಿಯಲ್ಲಿರುವ ಗಾಂಧಿ ಸ್ಮಾರಕ ನಿಧಿ, ಸಾಬರಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್, ಸಾಬರಮತಿ ಆಶ್ರಮ ಗೋಶಾಲಾ ಟ್ರಸ್ಟ್, ಹರಿಜನ ಆಶ್ರಮ ಟ್ರಸ್ಟ್, ಹರಿಜನ ಸೇವಕ ಸಂಘಮತ್ತು ಖಾದಿ ಗ್ರಾಮೋದ್ಯೋಗ ಪ್ರಯೋಗ ಸಮಿತಿ, ಸಾಬರಮತಿ ನದಿ ಅಭಿವೃದ್ಧಿ ನಿಗಮ ಹಾಗೂ ಅಹಮದಾಬಾದ್ ಮಹಾನಗರ ಪಾಲಿಕೆಗಳ ವಿರುದ್ಧ ಪಿಐಎಲ್ ಸಲ್ಲಿಸಲಾಗಿದೆ.
ಮಹಾತ್ಮಾ ಗಾಂಧೀಜಿ ಅವರು 30 ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ ಈ ಆಶ್ರಮವನ್ನು ₹ 1,200 ಕೋಟಿ ವೆಚ್ಚದಡಿ ಪುನರ್ ಅಭಿವೃದ್ಧಿಪಡಿಸುವ ಯೋಜನೆ ಕೈಗೆತ್ತಿಕೊಳ್ಳುವ ಮೂಲಕ, ಅದರ ಮೂಲ ಚಹರೆಯನ್ನೇ ಬದಲಿಸಲಾಗುತ್ತಿದೆ ಎಂದು ಅನೇಕ ಸಂಘಟನೆಗಳು ಆರೋಪಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.