ಬೆಂಗಳೂರು: ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿ ತಮ್ಮ ಸ್ನೇಹಿತನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿರುವ ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಯ, ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ.
ಸಂಶೋಧನಾ ವಿದ್ಯಾರ್ಥಿಯಾಗಿದ್ದ ತಮ್ಮ ಸ್ನೇಹಿತ ಅಮರನಾಥ್ ಘೋಷ್ ಅವರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ, ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
'ನನ್ನ ಸ್ನೇಹಿತ ಅಮರನಾಥ್ ಘೋಷ್ ಅವರನ್ನು ಸೇಂಟ್ ಲೂಯಿಸ್ ಅಕಾಡೆಮಿ ಬಳಿ ಮಂಗಳವಾರ ಸಂಜೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರ ತಾಯಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ತಂದೆಯವರು ಘೋಷ್ ಬಾಲ್ಯದಲ್ಲಿದ್ದಾಗಲೇ ತೀರಿಕೊಂಡಿದ್ದರು' ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಆರೋಪಿಯ ವಿವರಗಳು ಬಹಿರಂಗವಾಗಿಲ್ಲ. ಸ್ನೇಹಿತರನ್ನು ಬಿಟ್ಟರೆ, ಹೋರಾಟ ನಡೆಸಲು ಘೋಷ್ ಕುಟುಂಬದ ಯಾರೊಬ್ಬರೂ ಇಲ್ಲ. ಒಳ್ಳೆಯ ನೃತ್ಯಗಾರ, ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ಘೋಷ್ ಕೋಲ್ಕತ್ತದವನು. ಸಂಜೆ ವಿಹರಿಸುತ್ತಿದ್ದ ವೇಳೆ, ಅಪರಿಚಿತನೊಬ್ಬ ಇದ್ದಕ್ಕಿದ್ದಂತೆ ಹಲವು ಬಾರಿ ಗುಂಡು ಹಾರಿಸಿದ್ದಾನೆ' ಎಂದು ವಿವರಿಸಿದ್ದಾರೆ.
'ಅಮೆರಿಕದಲ್ಲಿರುವ ಕೆಲವು ಸ್ನೇಹಿತರು ಶವ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ' ಎಂದಿರುವ ಭಟ್ಟಾಚಾರ್ಯ, ಸಾಧ್ಯವಾದರೆ ಈ ಬಗ್ಗೆ ಗಮನಹರಿಸಿ ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.
ತಮ್ಮ ಪೋಸ್ಟ್ ಜೊತೆಗೆ ನರೇಂದ್ರ ಮೋದಿ ಹಾಗೂ ಜೈಶಂಕರ್ ಅವರನ್ನು ಟ್ಯಾಗ್ ಮಾಡಿರುವ ನಟಿ, ಹತ್ಯೆಗೆ ಕಾರಣವೇನು ಎಂಬುದಾದರೂ ಗೊತ್ತಾಗಬೇಕು ಎಂದು ಒತ್ತಾಯಿಸಿದ್ದಾರೆ.
ಭಟ್ಟಾಚಾರ್ಯ ಅವರು, ಹಿಂದಿಯ 'ಸಾಥ್ ನಿಭಾನಾ ಸಾಥಿಯಾ' ಧಾರಾವಾಹಿ, ಬಿಗ್ ಬಾಸ್ ಸೇರಿದಂತೆ ಕಿರುತೆರೆಯ ಹಲವು ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.
ಅಮೆರಿಕದಲ್ಲಿ ಭಾರತೀಯ ಮೂಲದವರ ಮೇಲಿನ ದಾಳಿ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿವೆ.
4 ವರ್ಷದ ಅವಳಿ ಮಕ್ಕಳನ್ನೊಳಗೊಂಡ ಭಾರತೀಯ ಮೂಲದ ಇಡೀ ಕುಟುಂಬದ ಶವಗಳು ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಪತ್ತೆಯಾಗಿದ್ದವು. ಅದು ಆತ್ಯಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಫೆಬ್ರುವರಿ 10ರಂದು ಭಾರತೀಯ ಮೂಲದ 41 ವರ್ಷದ ಟೆಕ್ಕಿಯೊಬ್ಬರ ಮೇಲೆ ವಾಷಿಂಗ್ಟನ್‌ನಲ್ಲಿ ಹಲ್ಲೆ ನಡೆದಿತ್ತು. ಬಳಿಕ ಅವರು ಮೃತಪಟ್ಟಿದ್ದರು.
ಅದಕ್ಕೂ ಮುನ್ನ, ಜಾರ್ಜಿಯಾದ ಲಿಥೋನಿಯಾ ನಗರದಲ್ಲಿ ಮಾದಕ ವ್ಯಸನಿಯೊಬ್ಬ ಭಾರತೀಯ ವಿದ್ಯಾರ್ಥಿ ವಿವೇಕ್ ಸೈನಿ (25) ಎಂಬುವವರ ಮೇಲೆ ಹಲ್ಲೆ ನಡೆಸಿದ್ದ. ಮತ್ತೊಬ್ಬ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ಬೆನಿಗಾರ್ (19) ಎನ್ನುವವರು ಓಹಿಯೊದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.