ADVERTISEMENT

ಜಮ್ಮು ವಾಯುನೆಲೆ ಮೇಲೆ ಡ್ರೋನ್‌ ದಾಳಿ; 'ಉಗ್ರರ ದಾಳಿ' ಎಂದ ಡಿಜಿಪಿ

ಪಿಟಿಐ
Published 27 ಜೂನ್ 2021, 12:43 IST
Last Updated 27 ಜೂನ್ 2021, 12:43 IST
ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆಯ ವಾಯುನೆಲೆಯ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಗಸ್ತು
ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆಯ ವಾಯುನೆಲೆಯ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಗಸ್ತು   

ಜಮ್ಮು: ಹೆಚ್ಚಿನ ಭದ್ರತೆ ಇರುವ ಜಮ್ಮುವಿನಲ್ಲಿರುವ ವಾಯುನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಅವಳಿ ಸ್ಫೋಟಗಳು 'ಉಗ್ರರ ದಾಳಿ' ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್‌ಬಾಗ್‌ ಸಿಂಗ್‌ ಹೇಳಿದ್ದಾರೆ.

ಸ್ಫೋಟಕಗಳನ್ನು ಹೊತ್ತು ಬಂದ ಡ್ರೋನ್‌ಗಳು ಬೆಳಗಿನಜಾವ 1:40ಕ್ಕೆ ಜಮ್ಮು ವಿಮಾನ ನಿಲ್ದಾಣದ ಭಾರತೀಯ ವಾಯುಪಡೆಯ ವಾಯುನೆಲೆಗೆ ಅಪ್ಪಳಿಸಿವೆ. ಸ್ಫೋಟದಲ್ಲಿ ವಾಯುಪಡೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಆರು ನಿಮಿಷಗಳ ಅಂತರದಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತ್ವಾರಿ ಪ್ರದೇಶದಲ್ಲಿರುವ ಭಾರತೀಯ ವಾಯುಪಡೆಯ ಸರಹದ್ದಿನ ತಾಂತ್ರಿಕ ವಲಯದಲ್ಲಿ ಸಂಭವಿಸಿದ ಮೊದಲ ಸ್ಫೋಟದಿಂದ ಕಟ್ಟಡವೊಂದರ ಮೇಲ್ಚಾವಣಿಗೆ ಹಾನಿಯಾಗಿದೆ. ಎರಡನೇ ಸ್ಫೋಟವು ನೆಲದ ಮೇಲೆ ಆಗಿದೆ ಎಂದಿದ್ದಾರೆ.

ADVERTISEMENT

'ಪೊಲೀಸರು, ಭಾರತೀಯ ವಾಯುಪಡೆ ಹಾಗೂ ಇತರೆ ಭದ್ರತಾ ಸಂಸ್ಥೆಗಳು ದಾಳಿಯ ಕುರಿತು ತನಿಖೆ ಕೈಗೊಂಡಿವೆ' ಎಂದು ದಿಲ್‌ಬಾಗ್‌ ತಿಳಿಸಿದ್ದಾರೆ.

ಅವಳಿ ಸ್ಫೋಟಗಳಿಗೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ವಾಯುಪಡೆ ಉಪಮುಖ್ಯಸ್ಥ ಏರ್‌ಮಾರ್ಷಲ್‌ ಎಚ್‌.ಎಸ್‌.ಅರೋರಾ ಅವರೊಂದಿಗೆ ಚರ್ಚೆ ನಡೆಸಿ, ಮಾಹಿತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.