ADVERTISEMENT

ತಿರುಚಿದ ವಿಡಿಯೊ: ಜಿಗ್ನೇಶ್‌ ಮೆವಾನಿ ಸಹಾಯಕ ಸೇರಿ ಇಬ್ಬರ ಬಂಧನ

ಪಿಟಿಐ
Published 1 ಮೇ 2024, 3:29 IST
Last Updated 1 ಮೇ 2024, 3:29 IST
ಜಿಗ್ನೇಶ್‌ ಮೆವಾನಿ
ಜಿಗ್ನೇಶ್‌ ಮೆವಾನಿ   

ನವದೆಹಲಿ: ಮೀಸಲಾತಿ ಕುರಿತ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯ ತಿರುಚಿದ ವಿಡಿಯೊ ಹಂಚಿಕೊಂಡ ಆರೋಪದ ಮೇರೆಗೆ ಕಾಂಗ್ರೆಸ್‌ ಶಾಸಕ ಜಿಗ್ನೇಶ್‌ ಮೆವಾನಿ ಅವರ ಆಪ್ತ ಸಹಾಯಕ (ಪಿಎ) ಸೇರಿದಂತೆ ಇಬ್ಬರನ್ನು ಅಹಮದಾಬಾದ್‌ನ ಸೈಬರ್‌ ಅಪರಾಧ ವಿಭಾಗವು ಮಂಗಳವಾರ ಬಂಧಿಸಿದೆ.

ವಡ್ಗಾಮ್‌ನ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್‌ ಮೆವಾನಿ ಅವರ ಪಿಎ ಸತೀಶ್‌ ವಂಸೋಲಾ ಹಾಗೂ ಎಎಪಿ ನಾಯಕ ಆರ್‌.ಬಿ.ಬರಿಯಾ ಬಂಧಿತ ಆರೋಪಿಗಳು. ಐಪಿಸಿ ಕಲಂ 153ಎ, 505 (1), 469 ಹಾಗೂ ಐಟಿ ಕಾಯ್ದೆಯ ಅಡಿ ಅವರನ್ನು ಬಂಧಿಸಲಾಗಿದೆ.

ಎಡಿಟ್‌ ಮಾಡಿದ ಮತ್ತು ತಿರುಚಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಎರಡು ಪ್ರೊಫೈಲ್‌ಗಳನ್ನು ಗುರುತಿಸಿ, ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ಸೈಬರ್‌ ಕ್ರೈಂ ಉಪ ಪೊಲೀಸ್‌ ಆಯುಕ್ತರಾದ ಲವಿನಾ ಸಿನ್ಹಾ ಹೇಳಿದ್ದಾರೆ. ತಿರುಚಿದ ವಿಡಿಯೊ ಕುರಿತು ತನಿಖೆ ನಡೆಸುತ್ತಿರುವಾಗ, ಈ ಇಬ್ಬರು ಆರೋಪಿಗಳು ವಿಡಿಯೊವನ್ನು ಹಂಚಿಕೊಂಡಿರುವುದು ತಿಳಿದು ಬಂದಿತು ಎಂದು ಅವರು ತಿಳಿಸಿದ್ದಾರೆ. 

ADVERTISEMENT

ಧರ್ಮಾಧಾರಿತವಾಗಿ ನೀಡಲಾದ ಮುಸ್ಲಿಮರ ಮೀಸಲಾತಿಯನ್ನು ರದ್ದುಪಡಿಸಲು ಬದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತೆಲಂಗಾಣದಲ್ಲಿ ಕಳೆದ ವರ್ಷ ಹೇಳಿಕೆ ನೀಡಿದ್ದರು. ಆ ವಿಡಿಯೊವನ್ನು ತಿರುಚಿ, ಎಲ್ಲ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಪ್ರತಿಪಾದಿಸು ತ್ತಿದ್ದಾರೆ ಎಂಬಂತೆ ಬಿಂಬಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲಾಗಿದೆ. 

16 ಜನರ ವಿರುದ್ಧ ಪ್ರಕರಣ

ಮುಂಬೈ (ಪಿಟಿಐ): ಅಮಿತ್‌ ಶಾ ಅವರ ಡೀಪ್‌ಫೇಕ್‌ ವಿಡಿಯೊವನ್ನು ಹಂಚಿಕೊಂಡ ಆರೋಪದ ಮೇಲೆ ಮಹಾರಾಷ್ಟ್ರ ಯುವ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಘಟಕ ಮತ್ತು ಇತರ 16 ಜನರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂಬೈ ಬಿಜೆಪಿ ಘಟಕದ ಕಾರ್ಯಾಧ್ಯಕ್ಷ ಪ್ರತೀಕ್‌ ಕರ್ಪೆ ಅವರು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.