ನವದೆಹಲಿ: ಯಾರೂ ಊಹಿಸಿರದಂತಹಾ ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿಯಾಗಿ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಶನಿವಾರ ಮುಂಜಾನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ರಾಜ್ಯದ ಈ ದಿಢೀರ್ ಬೆಳವಣಿಗೆಯನ್ನು ಟ್ವಿಟರ್ ಬಳಕೆದಾರರು ಎಂದಿನಂತೆ ಕಾಲೆಳೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ 'ಸರ್ಜಿಕಲ್ ಸ್ಟ್ರೈಕ್' ಅನ್ನು ಟ್ವೀಟಿಗರು ನೆನಪಿಸಿಕೊಂಡಿದ್ದು, ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯೊಂದಿಗೆ ತಳುಕು ಹಾಕುತ್ತಿದ್ದಾರೆ. ಶಿವಸೇನಾ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ನೆಟ್ಟಿಗರು #SurgicalStrike ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ 2.5 ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ಶಿವಸೇನಾ ಮತ್ತು ಬಿಜೆಪಿ ನಡುವೆ ಹಂಚಿಕೆಯಾಗಬೇಕು ಎಂದು ಪಟ್ಟು ಹಿಡಿದಿದ್ದ ಸೇನಾ ಆಸೆ ಈಡೇರದ ಬೆನ್ನಲ್ಲೇ ಎನ್‌ಡಿಎ ಒಕ್ಕೂಟದಿಂದಲೇ ಹೊರಬಂದಿತ್ತು.
ಕಳೆದ ಬಾರಿಯೂ ಹೀಗೆ ಆಗಿತ್ತು.ಅದನ್ನು ನಾವು ಸರ್ಜಿಕಲ್ ಸ್ಟ್ರೈಕ್ ಎಂದು ಕರೆದಿದ್ದೆವು. ವಿಪಕ್ಷಗಳು ನಾವು ಗೆದ್ದೆವು ಎಂದು ಕೊಂಡು ಮಲಗಿದ್ದರು. ಆದರೆ ಇಂದು ಮುಂಜಾನೆ ಎಲ್ಲವೂ ಬದಲಾಗಿತ್ತು. ಬಿಜೆಪಿಯು ಸರ್ಕಾರ ರಚನೆಯಿಂದ ಹೊರಬಂದಿದೆ ಎಂದು ನಂಬಿದ್ದರು ಮತ್ತು ಕೆಲವರು ನಿನ್ನೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು. ಆದರೆ ಏಕಾಏಕಿ ಲೆಕ್ಕಾಚಾರ ಬದಲಾಗಿದೆ ಎಂದು ಜಿಗರ್ ಶಾ ಎಂಬುವರು ಟ್ವೀಟ್ ಮಾಡಿದ್ದಾರೆ.
ಉದ್ಧವ್ ಠಾಕ್ರೆ, ಸಂಜಯ್ ರಾವುತ್ ಮತ್ತು ಶಿವಸೇನಾ ಮೇಲೆ ಇದು ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಎಂದು ಮತ್ತೊಬ್ಬ ಬಳಕೆದಾರ ಸುಶಾಂತ್ ಕರ್ ಬರೆದಿದ್ದಾರೆ.
ಬಿಜೆಪಿಯು ಆಪರೇಷನ್ ಕಮಲವನ್ನು ಕರ್ನಾಟಕದಲ್ಲಿ ಮಾಡಿತ್ತು ಮತ್ತು ಇಂದು ಆಪರೇಷನ್ ಎನ್‌ಸಿಪಿಯನ್ನು ಮಾಡಿ ಮುಗಿಸಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಮತ್ತೊಬ್ಬರು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರೊಂದಿಗಿನ ಅಮಿತ್ ಶಾ ಅವರ ಫೋಟೊವನ್ನು ಟ್ವೀಟ್ ಮಾಡಿ, ಲಾಸ್ಟ್ ಓವರ್‌ನಲ್ಲಿ ಇಡೀ ಆಟವನ್ನೇ ಬದಲಿಸುವ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಎಂದಿದ್ದಾರೆ.
ರಾಜಕೀಯದ ಚಾಣಕ್ಯ ಅಮಿತ್ ಶಾ ಬರುವರೆಗೂ ಎಲ್ಲರೂ ಚಾಣಕ್ಯರೇ... ಜೈ ಹೋ ಮೋಟಾ ಬಾಯ್ ಎಂದು ಅಕ್ಷಯ್ ಅಕ್ಕಿ ಎಂಬುವರು ಟ್ವೀಟ್ ಮಾಡಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಶಿವಸೇನಾ ಮತ್ತು ಕಾಂಗ್ರೆಸ್ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚನೆಯ ಮಾತುಕತೆ ನಡೆಸುವ ವೇಳೆಗೆ ಎನ್‌ಸಿಪಿಯ ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ಸೂಚಿಸಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತ ಶರದ್ ಪವಾರ್, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬೆಂಬಲ ನೀಡಿರುವ ಅಜಿತ್ ಪವಾರ್ ನಿರ್ಧಾರ ಅವರ ವೈಯಕ್ತಿಕವೇ ಹೊರತು ಎನ್‌ಸಿಪಿ ಪಕ್ಷದಲ್ಲ. ಅಜಿತ್ ನಿರ್ಧಾರವನ್ನು ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು.
ಒಟ್ಟಿನಲ್ಲಿ ಸರ್ಕಾರ ರಚನೆಯಿಂದ ಬಿಜೆಪಿ ಹೊರಗುಳಿದಿದೆ ಎಂದೇ ಎಲ್ಲರೂ ಭಾವಿಸುತ್ತಿರುವ ವೇಳೆಗೆ ಎನ್‌ಸಿಪಿ ಜತೆಗೂಡಿದ ಬಿಜೆಪಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್ ಅವರನ್ನು ಪ್ರಮಾಣ ವಚನ ಸ್ವೀಕರಿಸುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.