ADVERTISEMENT

ರೈತರ ಪ್ರತಿಭಟನೆ: ತಡೆಹಿಡಿದಿದ್ದ ಹಲವು ಟ್ವಿಟರ್ ಖಾತೆಗಳ ಮರುಸ್ಥಾಪನೆ

ಪಿಟಿಐ
Published 3 ಫೆಬ್ರುವರಿ 2021, 8:11 IST
Last Updated 3 ಫೆಬ್ರುವರಿ 2021, 8:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ 'ಸುಳ್ಳು ಮತ್ತು ಪ್ರಚೋದನಕಾರಿ ವಿಚಾರವನ್ನು' ಹಂಚಿಕೊಂಡಿದ್ದ ಆರೋಪದ ಮೇಲೆ 250 ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿತ್ತು. ಸರ್ಕಾರದ ಮನವಿಗೆ ಪರಿಗಣಿಸಿ ಕ್ರಮ ಕೈಗೊಂಡಿದ್ದ ಟ್ವಿಟರ್, ಇದೀಗ ಆ ಎಲ್ಲ ಖಾತೆಗಳನ್ನು ಮರುಸ್ಥಾಪಿಸಿದೆ ಎಂದು ಮೂಲಗಳು ತಿಳಿಸಿವೆ.

ತಡೆಹಿಡಿಯಲಾಗಿದ್ದ ಈ ಖಾತೆಗಳಲ್ಲಿ ಕಿಸಾನ್ ಏಕ್ತಾ ಮೋರ್ಚಾ ಮತ್ತು ಬಿಕೆಯು ಏಕ್ತಾ ಉಗ್ರಹಣ್‌ನ ಸಾವಿರಾರು ಅನುಯಾಯಿಗಳು ಇದ್ದಾರೆ ಮತ್ತು ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಈ ಖಾತೆಗಳು ಈಗ ಆನ್‌ಲೈನ್ ಚಟುವಟಿಕೆಗಳನ್ನು ಪುನರಾರಂಭಿಸಿವೆ.

ಮೂಲಗಳ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಕಾನೂನು ಬದ್ಧ ಕೋರಿಕೆಗೆ ಪ್ರತಿಕ್ರಿಯೆಯಾಗಿ ಟ್ವಿಟರ್ ತನ್ನ 'ಕಂಟ್ರಿ ವಿಥ್‌ಹೆಲ್ಡ್ ಕಂಟೆಂಟ್' ನೀತಿಯಡಿಯಲ್ಲಿ ಕೆಲವು ಖಾತೆಗಳನ್ನು ನಿರ್ಬಂಧಿಸಿತ್ತು.

ADVERTISEMENT

ನಂತರ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆದ ಸಭೆಗಳಲ್ಲಿ, ಸದ್ಯ ಪ್ರಶ್ನಾರ್ಹವಾಗಿರುವ ಖಾತೆಗಳು ಮತ್ತು ಟ್ವೀಟ್‌ಗಳು 'ವಾಕ್ ಸ್ವಾತಂತ್ರ್ಯ' ಮತ್ತು 'ಸುದ್ದಿಗೆ ಅರ್ಹವಾಗಿವೆ' ಎಂದು ತೀರ್ಮಾನಿಸಲಾಗಿದ್ದು, ನಂತರ ಟ್ವೀಟ್‌ಗಳು ಮತ್ತು ಖಾತೆಗಳನ್ನು 'ಪುನಃಸ್ಥಾಪಿಸಲಾಗಿದೆ' ಎಂದು ಟ್ವಿಟರ್ ತಿಳಿಸಿದೆ.

ಕಿಸಾನ್ ಏಕ್ತಾ ಮೋರ್ಚಾ (@Kisanektamorcha) ಮತ್ತು ಬಿಕೆಯು ಏಕ್ತಾ ಉಗ್ರಹಣ್ (@Bkuektaugrahan) ಸೇರಿದಂತೆ ಖಾತೆಗಳನ್ನು ಟ್ವಿಟರ್‌ನಲ್ಲಿ ನೋಡಿದಾಗ, 'ಕಾನೂನಾತ್ಮಕ ಮನವಿಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಈ ಖಾತೆಯನ್ನು ತಡೆಹಿಡಿಯಲಾಗಿದೆ' ಎಂಬ ಸಂದೇಶವನ್ನು ಸೋಮವಾರ ಪ್ರದರ್ಶಿಸಲಾಗಿತ್ತು.

ಇವುಗಳಲ್ಲದೆ, ಒಂದು ಮಾಧ್ಯಮದ ಖಾತೆ ಮತ್ತು ಒಂದು ಪ್ರತ್ಯೇಕ ಘಟಕದ ಹಿರಿಯ ಕಾರ್ಯಕಾರಿಣಿ ಸೇರಿದಂತೆ ಇತರ ಹಲವಾರು ವೈಯಕ್ತಿಕ ಮತ್ತು ಸಂಸ್ಥೆಯ ಖಾತೆಗಳನ್ನು ಸಹ ತಡೆಹಿಡಿಯಲಾಗಿತ್ತು. ಈ ಬೆಳವಣಿಗೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ಪ್ರಾರಂಭವಾಗಿದ್ದವು.

ಮೂಲಗಳ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeitY) ಜನವರಿ 30 ರಂದು 'ನಕಲಿ, ಬೆದರಿಸುವ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು' ಮಾಡುತ್ತಿರುವ ಸುಮಾರು 250 ಟ್ವೀಟ್‌ಗಳು / ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವಂತೆ ಟ್ವಿಟರ್‌ಗೆ ನಿರ್ದೇಶನ ನೀಡಿತ್ತು ಎನ್ನಲಾಗಿತ್ತು.

ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಉಲ್ಬಣಗೊಳ್ಳದಂತೆ ತಡೆಯಲು ಗೃಹ ಸಚಿವಾಲಯ ಮತ್ತು ಕಾನೂನು ಜಾರಿ ನಿರ್ದೇಶನಾಲಯಗಳ ಕೋರಿಕೆಯ ಮೇರೆಗೆ ಈ ನಿರ್ಬಂಧವನ್ನು ಮಾಡಲಾಗಿದೆ ಎಂದು ಟ್ವಿಟರ್ ಸ್ಪಷ್ಟಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.