ನವದೆಹಲಿ: ‘ಭಾರತದ ಲಡಾಖ್ ಪ್ರದೇಶವನ್ನು ಚೀನಾದ ಭಾಗವಾಗಿ ತೋರಿಸಿರುವುದಕ್ಕೆ ಜಂಟಿ ಸಂಸದೀಯ ಸಮಿತಿಯಮುಂದೆ ಟ್ವಿಟರ್ ನೀಡಿದ ವಿವರಣೆ ಅಸಮರ್ಪಕವಾಗಿತ್ತು. ಇಂಥ ನಡೆಯು ಅಪರಾಧವಾಗಿದ್ದು ಏಳು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ’ ಎಂದು ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ಬುಧವಾರ ಹೇಳಿದರು.
ಲಡಾಖ್ ಅನ್ನು ಚೀನಾ ಭಾಗವಾಗಿ ತೋರಿಸಿರುವುದರ ಕುರಿತಂತೆ ದತ್ತಾಂಶ ರಕ್ಷಣೆ ಮಸೂದೆ, 2019ರ ಜಂಟಿ ಸಂಸತ್ ಸಮಿತಿಯ ಸದಸ್ಯರು ಟ್ವಿಟರ್ ಪ್ರತಿನಿಧಿಗಳನ್ನು ಬುಧವಾರ ಪ್ರಶ್ನಿಸಿದರು. ‘ಟ್ವಿಟರ್ ಪ್ರತಿಕ್ರಿಯೆಯು ಅಸಮರ್ಪಕ ಎಂದು ಸಮಿತಿಯು ಸರ್ವಾನುಮತದ ಅಭಿಪ್ರಾಯವನ್ನು ಹೊಂದಿದೆ’ ಎಂದು ಲೇಖಿ ತಿಳಿಸಿದರು.
‘ಇದು ಸೂಕ್ಷ್ಮತೆಯ ಪ್ರಶ್ನೆಯಷ್ಟೇ ಅಲ್ಲ. ಇದು ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆಯ ವಿಷಯ. ಲಡಾಖ್ ಅನ್ನು ಚೀನಾದ ಭಾಗವಾಗಿ ತೋರಿಸುವುದು ಅಪರಾಧ’ ಎಂದರು.
ಟ್ವಿಟರ್ ಇಂಡಿಯಾ ಪರವಾಗಿ ಸಾರ್ವಜನಿಕ ನೀತಿ ವಿಭಾಗದ ಹಿರಿಯ ವ್ಯವಸ್ಥಾಪಕ ಶಾಗುಫ್ತಾ ಕಮ್ರನ್, ಕಾನೂನು ಸಲಹೆಗಾರರಾದ ಆಯುಷಿ ಕಪೂರ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು. ಮಾಹಿತಿ ತಂತ್ರಜ್ಞಾನ ಸಚಿವಾಲಯ, ಕಾನೂನು ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.