ಕೋಯಿಕ್ಕೋಡ್: ನಿಫಾ ವೈರಾಣು ಹಿನ್ನೆಲೆಯಲ್ಲಿ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಇಂದು ಮತ್ತು ನಾಳೆ (ಗುರುವಾರ ಹಾಗೂ ಶುಕ್ರವಾರ) ರಜೆ ಘೋಷಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಗೀತಾ ಮಾಹಿತಿ ನೀಡಿದ್ದು, ಆನ್‌ಲೈನ್ ಮೂಲಕ ತರಗತಿ ಏರ್ಪಡಿಸಲು ಶಿಕ್ಷಣ ಸಂಸ್ಥೆಗಳು ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.
ಹಾಗಿದ್ದರೂ ವಿಶ್ವವಿದ್ಯಾಲಯಗಳ ಪರೀಕ್ಷೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಈವರೆಗೆ ಐದು ಮಂದಿಯಲ್ಲಿ ನಿಪಾ ಸೋಂಕು ದೃಢಪಟ್ಟಿದೆ. ಬುಧವಾರದಂದು ಒಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ವೈರಾಣು ಪತ್ತೆಯಾಗಿದೆ.
ನಿಪಾ ವೈರಸ್ ಹಿನ್ನೆಲೆಯಲ್ಲಿ ಕೋಯಿಕ್ಕೋಡ್ ಜೊತೆಗೆ ಹತ್ತಿರದ ವಯನಾಡ್ ಜಿಲ್ಲೆಯಲ್ಲೂ 24 ತಾಸು ಕಾರ್ಯನಿರ್ವಹಿಸಲಿರುವ ನಿಯಂತ್ರಣ ಕೊಠಡಿ ತೆರೆಯಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನ ವರದಿ ಪ್ರಕಾರ ಕೋಯಿಕ್ಕೋಡ್ ಮಾತ್ರವಲ್ಲದೆ ಇಡೀ ಕೇರಳದಲ್ಲಿ ಇಂತಹ ಪ್ರಸರಣಗಳಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಈಗ ಪತ್ತೆಯಾಗಿರುವ ವೈರಾಣು ಅರಣ್ಯ ಪ್ರದೇಶದ ಐದು ಕಿಲೋಮೀಟರ್‌ನಲ್ಲಿ ಹುಟ್ಟಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.