ಜೋಧಪುರ: ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ನಡೆಸಿದ ‘ನಿರ್ದಿಷ್ಟ ದಾಳಿ’ಗೆ ಎರಡು ವರ್ಷ ತುಂಬಿದ ಪ್ರಯುಕ್ತ ಹಮ್ಮಿಕೊಂಡಿರುವ ಎರಡು ದಿನಗಳ ‘ಪರಿಕ್ರಮ ಪರ್ವ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಶುಕ್ರವಾರ ಚಾಲನೆ ನೀಡಿದರು.
‘ತಾಯ್ನಾಡಿನ ರಕ್ಷಣೆಗೆ ಬದ್ಧವಾಗಿರುವ ಭದ್ರತಾ ಪಡೆಗಳ ಬಗ್ಗೆ ಹೆಮ್ಮೆಪಡಬೇಕಾಗಿದೆ’ ಎಂದು ಕೊನಾರ್ಕ್ ಯುದ್ಧ ಸ್ಮಾರಕದ ಬಳಿಯ ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಿ ಗುಜರಾತಿ ಭಾಷೆಯಲ್ಲಿ ಬರೆದರು.
ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ, ಅತ್ಯುಚ್ಚ ತ್ಯಾಗ ಮಾಡಿರುವ ಯೋಧರು ಶತಮಾನಗಳವರೆಗೆ ಸ್ಫೂರ್ತಿಯ ಚಿಲುಮೆಯಾಗಿರುತ್ತಾರೆ ಎಂದು ಬಣ್ಣಿಸಿದರು.
ನಿರ್ದಿಷ್ಟ ದಾಳಿ ದಿನ (ಶ್ರೀನಗರ ವರದಿ): ಇದೇ 28ರಿಂದ 30ರವರೆಗೆ ‘ನಿರ್ದಿಷ್ಟ ದಾಳಿ ದಿನ’ವನ್ನು ಆಚರಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಶಿಕ್ಷಣ ಇಲಾಖೆಗೆ ತಿಳಿಸಿದೆ. ಈ ಕಾರ್ಯಕ್ರಮದ ಫೋಟೊಗಳು ಮತ್ತು ವಿಡಿಯೊಗಳನ್ನು ಅ.1ರೊಳಗೆ ನೀಡುವಂತೆ ಸೂಚನೆ ನೀಡಿದೆ.
ರಕ್ಷಣೆಗಾಗಿ ಗಡಿ ದಾಟುತ್ತೇವೆ: 2016ರ ಸೆ. 29ರಂದು ನಡೆದ ನಿರ್ದಿಷ್ಟ ದಾಳಿ ‘ಭಾರತದ ಹೊಸ ಮುಖ’ವನ್ನು ಅನಾವರಣ ಮಾಡಿದೆ; ದೇಶದ ರಕ್ಷಣೆಗಾಗಿ ಯಾವುದೇ ಗಡಿ ದಾಟಲು ಸಿದ್ಧ ಎಂಬುದನ್ನು ತೋರಿಸಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದರು. ನಿರ್ದಿಷ್ಟದಾಳಿ ಪ್ರಯುಕ್ತ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
27 ನೆಲೆಗಳಲ್ಲಿ ಉಗ್ರರು ಸಕ್ರಿಯ
250ಕ್ಕೂ ಹೆಚ್ಚು ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆ ನಿಂತಿದ್ದು, ಕಾಶ್ಮೀರದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ. 27 ನೆಲೆಗಳಲ್ಲಿ ಈ ಉಗ್ರರು ಸಕ್ರೀಯರಾಗಿದ್ದಾರೆ.
ನಿರ್ದಿಷ್ಟ ದಾಳಿಗೆ ಸಂಬಂಧಿಸಿದ ಹೊಸ ವಿಡಿಯೊ ತುಣುಕನ್ನು ಕೇಂದ್ರ ಸರ್ಕಾರ ಮಂಗಳವಾರ ರಾತ್ರಿ ಬಿಡುಗಡೆ ಮಾಡಿದೆ. ಯುಎವಿಗಳನ್ನು (ಮಾನವ ರಹಿತ ಹಾರುವ ಯಂತ್ರಗಳು) ಬಳಸಿ ಚಿತ್ರೀಕರಿಸಿರುವ ಈ ವಿಡಿಯೊದಲ್ಲಿ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದ ಸೇನೆಯ ದಾಳಿ ಕಾರ್ಯಾಚರಣೆ ದಾಖಲಾಗಿದೆ.
ಮತ್ತೊಂದು ವಿಡಿಯೊ ಬಹಿರಂಗ
ನವದೆಹಲಿ:ನಿರ್ದಿಷ್ಟ ದಾಳಿಗೆ ಸಂಬಂಧಿಸಿದ ಹೊಸ ವಿಡಿಯೊ ತುಣುಕನ್ನು ಕೇಂದ್ರ ಸರ್ಕಾರ ಮಂಗಳವಾರ ರಾತ್ರಿ ಬಿಡುಗಡೆ ಮಾಡಿದೆ. ಈ ವಿಡಿಯೊ ಅಧಿಕೃತವಾದುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಅಧಿಕಾರಿಗಳು ಹೇಳಿದ್ದಾರೆ.
ಯುಎವಿಗಳನ್ನು (ಮಾನವ ರಹಿತ ಹಾರುವ ಯಂತ್ರಗಳು) ಬಳಸಿ ಚಿತ್ರೀಕರಿಸಿರುವ ಈ ವಿಡಿಯೊದಲ್ಲಿ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದ ಸೇನೆಯ ದಾಳಿ ಕಾರ್ಯಾಚರಣೆ ದಾಖಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ಕೆಲ ಟಿ.ವಿ ಚಾನೆಲ್‌ಗಳು ಸರ್ಜಿಕಲ್ ದಾಳಿಯದ್ದು ಎನ್ನಲಾದ ವಿಡಿಯೊ ಪ್ರಸಾರ ಮಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.