ADVERTISEMENT

ಮಥುರಾದಲ್ಲಿ ಆರ್‌ಎಸ್‌ಎಸ್‌ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಪ್ರಾರಂಭ

ರತನ್ ಟಾಟಾ ಸೇರಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ

ಪಿಟಿಐ
Published 25 ಅಕ್ಟೋಬರ್ 2024, 15:59 IST
Last Updated 25 ಅಕ್ಟೋಬರ್ 2024, 15:59 IST
ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಮಥುರಾದಲ್ಲಿ ಪ್ರಾರಂಭವಾದ ಸಂಘದ ಸಭೆಯಲ್ಲಿ ಭಾಗವಹಿಸಿದ್ದರು.
ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಮಥುರಾದಲ್ಲಿ ಪ್ರಾರಂಭವಾದ ಸಂಘದ ಸಭೆಯಲ್ಲಿ ಭಾಗವಹಿಸಿದ್ದರು.   

ಮಥುರಾ (ಯುಪಿ): ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಶುಕ್ರವಾರ ಆರಂಭವಾಯಿತು.

ಪಾರ್ಖಮ್‌ನಲ್ಲಿರುವ ದೀನದಯಾಳು ಗೋ ವಿಜ್ಞಾನ ಸಂಶೋಧನಾ ಮತ್ತು ತರಬೇತಿ ಕೇಂದ್ರದಲ್ಲಿ ಸಭೆ ಪ್ರಾರಂಭವಾಯಿತು. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಭೆಯ ಆರಂಭದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಇತ್ತೀಚೆಗೆ ನಿಧನರಾದ ಉದ್ಯಮಿ ರತನ್‌ ಟಾಟಾ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ, ಜೈಪುರದ ರಾಘವಾಚಾರ್ಯ ಮಹಾರಾಜ, ಸಿಪಿಐ–ಎಂ ನಾಯಕ ಸೀತಾರಾಮ ಯೆಚೂರಿ, ಕೇಂದ್ರದ ಮಾಜಿ ಸಚಿವ ಕೆ.ನಟ್ವರ್‌ ಸಿಂಗ್‌, ಬಿಜೆಪಿ ನಾಯಕ ಸುಶೀಲ್‌ ಮೋದಿ, ನೌಕಾಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಎಲ್‌.ರಾಮದಾಸ್‌ ಮತ್ತು ಮಾಧ್ಯಮ ದಿಗ್ಗಜ ರಾಮೋಜಿ ರಾವ್‌ ಸೇರಿ ಹಲವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ADVERTISEMENT

ಸಂಘದ ಅಖಿಲ ಭಾರತ ಸಹ ಪ್ರಚಾರ ಮುಖ್ಯಸ್ಥ ನರೇಂದ್ರ ಠಾಕೂರ್‌ ಈ ವೇಳೆ ಮಾತನಾಡಿ, ‘2025ರ ವಿಜಯ ದಶಮಿ ವೇಳೆಗೆ ಆರ್‌ಎಸ್‌ಎಸ್‌ ನೂರು ವರ್ಷಗಳನ್ನು ಪೂರೈಸಲಿದ್ದು, ಈ ಅವಧಿಯ ಯೋಜನೆಗಳ ಪರಾಮರ್ಶೆಯು ಎರಡು ದಿನಗಳ ಸಭೆಯಲ್ಲಿ ನಡೆಯಲಿದೆ. ವಿಜಯದಶಮಿಯ ತಮ್ಮ ಭಾಷಣದಲ್ಲಿ ಭಾಗವತ್‌ ಅವರು ಪ್ರಸ್ತಾಪಿಸಿದ ಪರಿಕಲ್ಪನೆಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ’ ಎಂದರು.

ಸಂಘದ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಎಲ್ಲಾ ‘ಮಂಡಲಗಳನ್ನು’ (ಪ್ರಾಥಮಿಕ ಸಾಂಸ್ಥಿಕ ಘಟಕಗಳು) ತಲುಪಲು ಯತ್ನಿಸುತ್ತಿದ್ದೇವೆ. ಈ ವಿಷಯ ಕುರಿತು ಸಭೆಯಲ್ಲಿ ಕಾರ್ಯ ಯೋಜನೆ ಸಿದ್ಧಪಡಿಸಲಾಗುವುದು,’ ಎಂದರು.

‘ಸಭೆಯಲ್ಲಿ ಈವರೆಗೆ ಕೈಗೊಂಡಿರುವ ಕೆಲಸಗಳ ಪರಾಮರ್ಶೆ ನಡೆಯಲಿದೆ. ಸಂಘದ ಶತಮಾನೋತ್ಸವ ವರ್ಷದಲ್ಲಿ ಕರ್ತವ್ಯದ ವಿಸ್ತರಣೆ ಮತ್ತು ಪಂಚ ಪರಿವರ್ತನೆ- ಸಾಮಾಜಿಕ ಸಾಮರಸ್ಯ, ಕೌಟುಂಬಿಕ ಅರಿವು, ಪರಿಸರ, ಸ್ವಾವಲಂಬಿ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯ ಕುರಿತು ಸಮಾಜಕ್ಕೆ ಅರಿವು ಮೂಡಿಸುವ ಚರ್ಚೆಗಳು ನಡೆಯಲಿವೆ’ ಎಂದು ಪ್ರಕಟಣೆ ತಿಳಿಸಿದೆ.

ಆರ್‌ಎಸ್‌ಎಸ್‌ನ ಕಾರ್ಯಕಾರಿ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸಂಘದ ವಿವಿಧ ರಾಜ್ಯಗಳ 393 ಸದಸ್ಯರು, ಎಲ್ಲಾ 11 ಪ್ರದೇಶಗಳ ಮತ್ತು 46 ಪ್ರಾಂತ್ಯಗಳ ಕಾರ್ಯವಾಹಕರು ಮತ್ತು ಪ್ರಚಾರಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಜಮ್ಮು–ಕಾಶ್ಮೀರ, ಕೇರಳ ಮತ್ತು ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ತ್ರಿಪುರಾದಿಂದಲೂ ಕಾರ್ಯಕರ್ತರು ಭಾಗವಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.