ಜೈಪುರ: ಅಂಗಾಂಗ ಕಸಿಗೆ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ) ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರದ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಪುರದ ಫೋರ್ಟಿಸ್ ಆಸ್ಪತ್ರೆಯ ಮೂತ್ರಪಿಂಡಶಾಸ್ತ್ರಜ್ಞ ಡಾ. ಜಿತೇಂದ್ರ ಗೋಸ್ವಾಮಿ ಮತ್ತು ಮೂತ್ರಶಾಸ್ತ್ರಜ್ಞ ಡಾ. ಸಂದೀಪ್ ಗುಪ್ತಾ ಬಂಧಿತರು.
ಅಂಗಾಂಗಕ್ಕಾಗಿ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ ಪ್ರಕರಣದಲ್ಲಿ ರಾಜಸ್ಥಾನ ಸರ್ಕಾರ ಮಂಗಳವಾರ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ರಾಜೀವ್ ಮತ್ತು ಎಸ್‌ಎಂಎಸ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಅಚಲ್ ಶರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸಿತ್ತು.
ಅಲ್ಲದೇ ರಾಜ್ಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆ (ಎಸ್‌ಒಟಿಒ) ಗಾಗಿ ರಚಿಸಲಾದ ಸ್ಟೀರಿಂಗ್ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಡಾ ಸುಧೀರ್ ಭಂಡಾರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ. ಭಂಡಾರಿ ಅವರು ರಾಜಸ್ಥಾನ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಯುಎಚ್‌ಎಸ್)ಉಪಕುಲಪತಿ ಹುದ್ದೆಗೆ ಗುರುವಾರ ರಾಜೀನಾಮೆ ನೀಡಿದ್ದಾರೆ.
ಏಪ್ರಿಲ್ 1 ರಂದು, ಭ್ರಷ್ಟಾಚಾರ ನಿಗ್ರಹ ದಳದ ತಂಡವು ಅಂಗಾಂಗ ಕಸಿಗೆ ಸಂಬಂಧಿಸಿದಂತೆ ಎನ್‌ಒಸಿ ನೀಡಲು ಲಂಚ ಪಡೆದ ಆರೋಪದಡಿ ಮೂವರನ್ನು ಬಂಧಿಸಿತ್ತು. ಈ ಆರೋಪಿಗಳು ಹಣ ಪಡೆದು ನಕಲಿ ಎನ್‌ಒಸಿ ನೀಡುತ್ತಿದ್ದರು ಎನ್ನಲಾಗಿದೆ. ಇದಾದ ಬಳಿಕ ಜೈಪುರದ ಕೆಲವು ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.