ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಎರಡು ಡ್ರೋನ್ ಪತ್ತೆ: ಸೇನೆಯಿಂದ ಗುಂಡಿನ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2021, 8:25 IST
Last Updated 28 ಜೂನ್ 2021, 8:25 IST
ಐಸ್ಟಾಕ್: ಪ್ರಾತಿನಿಧಿಕ ಚಿತ್ರ
ಐಸ್ಟಾಕ್: ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಎರಡು ಸ್ಫೋಟಕಗಳನ್ನು ತುಂಬಿಕೊಂಡು ಬಂದಿದ್ದ ಡ್ರೋನ್‌ಗಳು ಜಮ್ಮುವಿನಲ್ಲಿರುವ ಐಎಎಫ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿ ಇಬ್ಬರನ್ನು ಗಾಯಗೊಳಿಸಿದ ಘಟನೆ ಬೆನ್ನಲ್ಲೇ ಮತ್ತೆರಡು ಡ್ರೋನ್‌ಗಳು ಈ ಭಾಗದಲ್ಲಿ ಕಂಡ ಬಗ್ಗೆ ವರದಿಯಾಗಿದೆ.

ಜೂನ್ 27ರ ಮಧ್ಯರಾತ್ರಿಯಲ್ಲಿ ರತ್ನುಚಕ್-ಕಲುಚಕ್ ಮಿಲಿಟರಿ ಪ್ರದೇಶದ ಆಗಸದಲ್ಲಿ ಭಾರತೀಯ ಸೇನೆಯು ಎರಡು ಅನುಮಾನಾಸ್ಪದ ಡ್ರೋನ್ ಚಟುವಟಿಕೆಗಳನ್ನು ಗುರುತಿಸಿದೆ ಎಂದು ಎಎನ್‌ಐ, ಡಿಫೆನ್ಸ್ ಪಿಆರ್‌ಓ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ.

ಅನುಮಾನಾಸ್ಪದ ಡ್ರೋನ್‌ಗಳ ಸಂಚಾರದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಹೈಅಲರ್ಟ್ ನೀಡಲಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ತಂಡಗಳು ಕೂಡಲೇ ಗುಂಡಿನ ದಾಳಿ ನಡೆಸಿದವು. ‘ಎರಡೂ ಡ್ರೋನ್‌ಗಳು ಕಣ್ಮರೆಯಾದವು. ಸೈನ್ಯದ ಜಾಗರೂಕತೆ ಮತ್ತು ಕ್ರಿಯಾಶೀಲ ಕಾರ್ಯಾಚರಣೆಯಿಂದ ಒಂದು ದೊಡ್ಡ ಆಪತ್ತು ದೂರಾಗಿದೆ. ಈ ಬಗ್ಗೆ ಭದ್ರತಾ ಪಡೆಗಳು ಹೆಚ್ಚಿನ ಎಚ್ಚರಿಕೆ ವಹಿಸಿವೆ ಮತ್ತು ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಮುಂಜಾನೆ 3 ಗಂಟೆ ಸುಮಾರಿಗೆ ಕಲುಚಕ್‌ನಲ್ಲಿ ಸೇನೆ ಒಂದು ಡ್ರೋನ್ ಅನ್ನು ಗುರುತಿಸಿದ್ದು, ಅದನ್ನು ಹೊಡೆದುರುಳಿಸಲು ಕೂಡಲೇ ಗುಂಡಿನ ದಾಳಿ ನಡೆಸಿತ್ತು ಎಂದು ಅವರು ಹೇಳಿದ್ದಾರೆ.

ಮಿಲಿಟರಿ ನೆಲೆಯ ಹೊರಗಿನ ಇಡೀ ಪ್ರದೇಶವನ್ನು ತಕ್ಷಣವೇ ಸುತ್ತುವರಿಯಲಾಗಿದೆ ಮತ್ತು ಅಂತಿಮ ವರದಿಗಳು ಬಂದಾಗ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಇದುವರೆಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಇಲ್ಲಿನ ಭಾರತೀಯ ವಾಯುಪಡೆ (ಐಎಎಫ್) ನಿಲ್ದಾಣದ ಮೇಲೆ ಡ್ರೋನ್ ಬಳಸಿ ಉಗ್ರರು ಎರಡು ಬಾಂಬ್‌ಗಳನ್ನು ಎಸೆದ ಮರುದಿನವೇ ಎರಡು ಡ್ರೋನ್‌ಗಳು ಕಂಡುಬಂದಿರುವುದು ಸೇನೆಗೆ ಸವಾಲಾಗಿ ಪರಿಣಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.