ಮುಂಬೈ: ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು
ಪರದಾಡಿದರು.
‘ಇಂಡಿಗೊ ಕಂಪನಿಯು 200 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ’ ಎಂದು ಮೂಲಗಳು ತಿಳಿಸಿವೆ.
ಬೆಳಿಗ್ಗೆ 10.40ಗಂಟೆಯಿಂದ ಇಂಡಿಗೊ, ಸ್ಪೈಸ್‌ಜೆಟ್, ಆಕಾಸಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಕಂಪನಿಗಳ ಸೇವೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ತಮಗಾಗಿರುವ ತೊಂದರೆ ಬಗ್ಗೆ ಹಲವು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡರು.
ಟಿಕೆಟ್ ಬುಕಿಂಗ್, ಚೆಕ್–ಇನ್ ಮತ್ತು ಬೋರ್ಡಿಂಗ್ ಪಾಸ್ ಪಡೆಯಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿತು. ವಿಮಾನಯಾನ ಕಂಪನಿಗಳ ಸಿಬ್ಬಂದಿ ಕೈಬರಹದ ಮೂಲಕ ಬೋರ್ಡಿಂಗ್ ಪಾಸ್ ವಿತರಿಸಿದರು.
‘ಭಾರತದಲ್ಲಿ ಶುಕ್ರವಾರ ವಿವಿಧ ಮಾರ್ಗಗಳಲ್ಲಿ 3,652 ವಿಮಾನಗಳ ಹಾರಾಟ ನಿಗದಿಯಾಗಿತ್ತು. ಈ ಪೈಕಿ ಹಲವು ವಿಮಾನಗಳ ಸಂಚಾರ ರದ್ದಾಗಿದೆ. ಕೆಲವು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ’ ಎಂದು ವಿಮಾನಯಾನ ವಿಶ್ಲೇಷಣಾ ಕಂಪನಿ ಸಿರಿಯಮ್ ತಿಳಿಸಿದೆ.
‘ಪ್ರಯಾಣಿಕರಿಗೆ ಆಗಿರುವ ತೊಂದರೆ ತಪ್ಪಿಸಲು ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಕ್ರಮಕೈಗೊಂಡಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಈ ಸಮಸ್ಯೆ ಮೇಲೆ ನಿಗಾ ಇಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.