ಇಂಫಾಲ: ಮಣಿಪುರ ರಾಜಧಾನಿ ಇಂಫಾಲದಲ್ಲಿ ಶುಕ್ರವಾರ ರಾತ್ರಿ ಉದ್ರಿಕ್ತ ಗುಂಪುಗಳು ಬಿಜೆಪಿ ನಾಯಕರ ಮನೆಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದವು. ಜತೆಗೆ ಭದ್ರತಾ ಪಡೆಗಳೊಂದಿಗೆ ಘರ್ಷಣೆಗೆ ಇಳಿದವು. ಘಟನೆಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.
ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್‌ಪುರ ಜಿಲ್ಲೆಯ ಕಾಂಗ್ವೈನಲ್ಲಿ ರಾತ್ರಿಯಿಡೀ ಗುಂಡಿನ ದಾಳಿಗಳು ವರದಿಯಾಗಿವೆ.
ಪಶ್ಚಿಮ ಇಂಫಾಲದ ಇರಿಂಗ್‌ಬಾಮ್ ಪೊಲೀಸ್ ಠಾಣೆಯನ್ನು ಲೂಟಿ ಮಾಡಲು ಪ್ರಯತ್ನಗಳು ನಡೆದವು. ಆದರೆ, ಯಾವುದೇ ಆಯುಧಗಳು ಕಳವಾಗದಂತೆ ಪೊಲೀಸರು ಎಚ್ಚರ ವಹಿಸಿದರು.
ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಕ್ಷಿಪ್ರ ಕಾರ್ಯಾಚರಣಾ ಪಡೆಗಳು ರಾಜ್ಯ ರಾಜಧಾನಿಯಲ್ಲಿ ಮಧ್ಯರಾತ್ರಿಯವರೆಗೆ ಜಂಟಿ ಕವಾಯತು ನಡೆಸಿ ಗಲಭೆಕೋರರನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಿದರು.
ಸರಿಸುಮಾರು 1,000 ಜನರ ಗುಂಪೊಂದು ಕಟ್ಟಡಗಳನ್ನು ಸುಡಲು ಪ್ರಯತ್ನಿಸಿತು.
ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಸಿಡಿಸಿದವು. ಮತ್ತೊಂದು ಗುಂಪು ಶಾಸಕ ಬಿಸ್ವಜೀತ್ ಮನೆಗೆ ಬೆಂಕಿ ಹಚ್ಚಲು ಯತ್ನಿಸಿತು. ಈ ಪ್ರಯತ್ನವನ್ನು ಹಿಮ್ಮೆಟ್ಟಿಸಲಾಯಿತು.
ಮಧ್ಯರಾತ್ರಿಯ ನಂತರ ಸಿಂಜೆಮೈಯಲ್ಲಿರುವ ಬಿಜೆಪಿ ಕಚೇರಿಯನ್ನು ಗುಂಪೊಂದು ಸುತ್ತುವರೆಯಿತು. ಆದರೆ ಭದ್ರತಾ ಪಡೆಗಳು ಗುಂಪನ್ನು ಚದುರಿಸಿದ ಕಾರಣ ಯಾವುದೇ ಹಾನಿ ಸಂಭವಿಸಲಿಲ್ಲ.
ಅದೇ ರೀತಿ ಇಂಫಾಲದ ಪೊರಂಪೇಟೆ ಬಳಿಯ ಬಿಜೆಪಿ ಮಹಿಳಾ ಅಧ್ಯಕ್ಷೆ ಶಾರದಾ ದೇವಿ ಅವರ ಮನೆಯನ್ನು ಮಧ್ಯರಾತ್ರಿ ಧ್ವಂಸ ಮಾಡಲು ದಾಳಿಕೋರರು ಯತ್ನಿಸಿದರು. ಭದ್ರತಾ ಪಡೆಗಳು ಅವರನ್ನು ಚದುರಿಸುವಲ್ಲಿ ಯಶಸ್ವಿಯಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.