ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಪಠಣ್ ಪ್ರದೇಶದಲ್ಲಿ ಮಂಗಳವಾರ ಜೈಶೆ–ಮೊಹಮ್ಮದ್ (ಜೆಇಎಂ) ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಭದ್ರತಾಪಡೆಗಳು ಬಂಧಿಸಿದ್ದು, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
‘ಬಂಧಿತ ಭಯೋತ್ಪಾದಕರನ್ನು ಅಕಿಬ್ ಮೊಹಮ್ಮದ್ ಮಿರ್ ಹಾಗೂ ಡ್ಯಾನಿಶ್ ಅಹದ್ ದಾರ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಜೈಶೆ ಮೊಹಮ್ಮದ್ ಸಂಘಟನೆಯ ಜತೆ ನಂಟು ಹೊಂದಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
’ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಪಠಣ್ ಪ್ರದೇಶದ ಹಂಜಿವೀರ ಪ್ರದೇಶದ ಬಳಿ ತಪಾಸಣೆ ನಡೆಸಿದಾಗ ಇಬ್ಬರು ಶಂಕಿತರು ಸಿಕ್ಕಿಬಿದ್ದಿದ್ದು, ಉಗ್ರರಿಂದ ಎರಡು ಚೀನಿ ಗ್ರೆನೆಡ್ ಹಾಗೂ ಎರಡು ಪಿಸ್ತೂಲ್‌ಗಳು ವಶಪಡಿಸಿಕೊಳ್ಳಲಾಯಿತು’ ಎಂದು ಪೊಲೀಸರು ತಿಳಿಸಿದರು.
ಅಪಘಾತ; ಆರು ಸಿಆರ್‌ಪಿಎಫ್ ಯೋಧರು ಗಾಯ:ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಜೈನ್‌ಪೋರಾ ಪ್ರದೇಶದಲ್ಲಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಏಳು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ.
‘ಜೈನ್‌ಪೋರಾದ ಬಳಿ ಅತಿ ವೇಗವಾಗಿ ಬಂದ ಟ್ರಕ್‌ವೊಂದು ಸಿಆರ್‌ಪಿಎಫ್‌ನ 178 ಬೆಟಾಲಿಯನ್ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ತೀವ್ರ ಗಾಯಗೊಂಡಿದ್ದು, ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.