ತಿರುವನಂತಪುರ:ಕೊಟ್ಟಾಯಂನ 34 ವರ್ಷದ ವಯಸ್ಸಿನ ಗೃಹಿಣಿಗೆ ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದ ಇಬ್ಬರು ಪಾದ್ರಿಗಳು ಸೋಮವಾರ ಕೊಲ್ಲಂ ಪೊಲೀಸರಿಗೆ ಶರಣಾಗಿದ್ದಾರೆ.
ಕೇರಳದ ಮಲಂಕಾರ ಸಿರಿಯಾ ಚರ್ಚ್‌ನ ನಾಲ್ವರು ಪಾದ್ರಿಗಳು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಬ್ಲ್ಯಾಕ್‌ಮೇಲ್ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಪ್ರಕರಣದ ಸಂಬಂಧ ಜಾಮೀನು ಕೋರಿ ಪಾದ್ರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್, ಆಗಸ್ಟ್ 13ರೊಳಗೆ ಪೊಲೀಸರಿಗೆ ಶರಣಾಗುವಂತೆ ಸೂಚಿಸಿತ್ತು. ಈ ಹಿಂದೆಯೇ ಇಬ್ಬರು ಪಾದ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋನಿ ವರ್ಗೀಸ್ ಮತ್ತು ಜೈಸಿ ಕೆ ಜಾರ್ಜ್ ಕೊಲ್ಲಂನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶರಣಾಗಿದ್ದು, ಅವರನ್ನು ಪ್ರಕರಣದ ತನಿಖೆ ನಡೆಸುತ್ತಿರುವ ತಂಡಕ್ಕೆ ಒಪ್ಪಿಸಲಾಗಿದೆ.
ಚರ್ಚ್‌ನಲ್ಲಿ ತಪ್ಪೊಪ್ಪಿಗೆ ನೀಡಿದ್ದ ಮಹಿಳೆಯ ಪರಿಸ್ಥಿತಿಯನ್ನು ಚರ್ಚ್‌ನ ಪಾದ್ರಿಗಳೇ ದುರ್ಬಳಕೆ ಮಾಡಿಕೊಂಡು ಅತ್ಯಾಚಾರ ನಡೆಸಿದ್ದಾಗಿ ಸಂತ್ರಸ್ತೆ ದೂರು ಸಲ್ಲಿಸಿದ್ದರು. ಕೇರಳ ಪೊಲೀಸ್‌ಅಪರಾಧ ವಿಭಾಗ (ಕ್ರೈಂಬ್ರಾಂಚ್) ಪ್ರಕರಣದ ತನಿಖೆ ನಡೆಸಿ, ಕಳೆದ ತಿಂಗಳು ಪಾದ್ರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.
ಪ್ರಕರಣದ ಹಿನ್ನೆಲೆ
ಎರಡು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ತನ್ನ 16ನೇ ವಯಸ್ಸಿನಲ್ಲಿ ಪ್ರಾರ್ಥನಾ ಸಭೆಯ ವೇಳೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಕುರಿತು ಫಾದರ್ ಜಾಬ್ ಮ್ಯಾಥ್ಯೂ ಅವರ ಬಳಿ ತಪ್ಪೊಪ್ಪಿಗೆ ಪದ್ಧತಿಯಲ್ಲಿ ಹೇಳಿಕೊಂಡಿದ್ದರು. 2009ರಲ್ಲಿ ಆಕೆ ಮದುವೆಯಾದ ಬಳಿಕ ಈ ತಪ್ಪೊಪ್ಪಿಗೆ ಹೇಳಿಕೆ ಮಾಡಿದ್ದರು. ಆ ಪಾದ್ರಿ ಅದನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದ ಹಾಗೂ ಜೈಸಿ ಕೆ ಜಾರ್ಜ್ ಮತ್ತು ಜಾನ್ಸನ್ ವಿ ಮ್ಯಾಥ್ಯೂ ಪಾದ್ರಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದ. ಈ ಎಲ್ಲರೂ ಆಕೆಯನ್ನುಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾಗಿ ಆರೋಪಿಸಲಾಗಿದೆ. ಮೊದಲಿಗೆ ಸಂತ್ರಸ್ತೆ ಫಾದರ್ ವರ್ಗೀಸ್‌ನಿಂದ ದೌರ್ಜನ್ಯಕ್ಕೆ ಒಳಗಾಗಿದ್ದರು.
ಅಪ್ರಾಪ್ತೆಯರ ಮೇಲೆ ಲೈಂಗಿನ ದೌರ್ಜನ್ಯ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳಲ್ಲಿ ಕೇರಳದಲ್ಲಿ ಕೆಲವು ತಿಂಗಳ ಅಂತರದಲ್ಲಿ 12 ಪಾದ್ರಿಗಳನ್ನು ಬಂಧಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.