ಕೋಲ್ಕತ್ತ: ಇಲ್ಲಿನ ಗಾರ್ಡನ್ ರೀಚ್ ಪ್ರದೇಶದ ಹಜಾರಿ ಮೊಲ್ಲಾ ಬಗಾನ್‌ನಲ್ಲಿ ಭಾನುವಾರ ತಡರಾತ್ರಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು , ಹಲವರು ಗಾಯಗೊಂಡಿದ್ದಾರೆ. ಇದುವರೆಗೆ ಕನಿಷ್ಠ 10 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೋಲ್ಕತ್ತ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದ್ದಾರೆ.
'ಭಾನುವಾರ ತಡರಾತ್ರಿ ಗಾರ್ಡನ್ ರೀಚ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದಿದೆ. ಅವಶೇಷಗಳಡಿ ಸಿಲುಕಿರುವ ಕೆಲವರನ್ನು ರಕ್ಷಿಸಲಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಕಟ್ಟಡ ಕುಸಿಯುವ ಮೊದಲು ಕಾಂಕ್ರೀಟ್ ತುಂಡುಗಳು ಬಿದ್ದಿದ್ದವು. ಕಟ್ಟಡ ಕುಸಿದ ತಕ್ಷಣ ಭಾರೀ ಸದ್ದು ಕೇಳಿ ಬಂದಿದ್ದು, ದಟ್ಟ ಧೂಳು ಆವರಿಸಿತು. ಸಮೀಪದ ಗುಡಿಸಲುಗಳ ಮೇಲೆ ಕಟ್ಟಡದ ಅವಶೇಷಗಳು ಬಿದ್ದಿವೆ' ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
‘ತುರ್ತು ರಕ್ಷಣೆ ಮತ್ತು ಪರಿಹಾರಕ್ಕಾಗಿ ಪಶ್ಚಿಮ ಬಂಗಾಳ ರಾಜ್ಯ ವಿಪತ್ತು ನಿರ್ವಹಣಾ ತಂಡದ ನೆರವು ಪಡೆಯುವಂತೆ ನಾನು ಮುಖ್ಯ ಕಾರ್ಯದರ್ಶಿ, ಗೃಹ ಸಚಿವರು ಹಾಗೂ ಪೊಲೀಸ್ ಕಮಿಷನರ್ ಅವರನ್ನು ಒತ್ತಾಯಿಸುತ್ತೇನೆ' ಎಂದು ಪಶ್ಚಿಮ ಬಂಗಾಳ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.