ಔರಂಗಾಬಾದ್ : ಇಬ್ಬರು ಯುವಕರನ್ನು ಅಡ್ಡಗಟ್ಟಿದ ಅಪರಿಚಿತರ ಗುಂಪು ‘ಜೈ ಶ್ರೀರಾಂ’ ಹೇಳುವಂತೆ ಜೀವಬೆದರಿಕೆ ಒಡ್ಡಿದ ಘಟನೆ ಮಹಾ ರಾಷ್ಟ್ರದ ಔರಂಗಾಬಾದ್ ನಗರದಲ್ಲಿ ನಡೆದಿದೆ. ಕಳೆದ ನಾಲ್ಕು ದಿನದಲ್ಲಿ ವರದಿಯಾದ ಎರಡನೇ ಪ್ರಕರಣ ಇದು.
ಇಲ್ಲಿನ ಆಜಾದ್ ಚೌಕದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸರು ಬಂದೋಬಸ್ತ್ ಬಿಗಿಗೊಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಸಿದ್ಧ ಆಹಾರ ಪೂರೈಸುವ ಸಂಸ್ಥೆಯ ನೌಕರನಾದ ಶೇಖ್ ಅಮರ್ (24) ಮತ್ತು ಆತನ ಗೆಳೆಯ ಶೇಖ್ ನಾಸಿರ್ (26) ಆಟೊರಿಕ್ಷಾಗೆ ಕಾದಿದ್ದಾಗ ಕಿಡಿಗೇಡಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಧಾರ್ಮಿಕವಾಗಿ ಯುವಕರನ್ನು ನಿಂದಿಸಿದ ಕಿಡಿಗೇಡಿಗಳು, ‘ಜೈಶ್ರೀರಾಂ‘ ಎಂದು ಹೇಳದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ ಆರೋಪದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಘಟನೆಯು ಸಿ.ಸಿ.ಟಿ.ವ ಕ್ಯಾಮೆರಾದಲ್ಲಿಯೂ ದಾಖಲಾಗಿದೆ.ಕಿಡಿಗೇಡಿಗಳು, ವಾಹನ ಗುರುತಿಸುವ ಯತ್ನ ನಡೆದಿದೆ. ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಆದರೆ, ಅವರು ಶಸ್ತ್ರಾಸ್ತ್ರ ಹೊಂದಿದ್ದರೆ ಎಂಬುದು ದೃಢಪಟ್ಟಿಲ್ಲ ಎಂದು ಪೊಲೀಸ್ ಆಯುಕ್ತ ಚಿರಂಜೀವಿ ಪ್ರಸಾದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.