ADVERTISEMENT

ಕಾಶ್ಮೀರದಲ್ಲಿ ಮುಂದುವರಿದ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ, ಯೋಧ ಹುತಾತ್ಮ

ಏಜೆನ್ಸೀಸ್
Published 18 ಜೂನ್ 2019, 4:17 IST
Last Updated 18 ಜೂನ್ 2019, 4:17 IST
ಭಯೋತ್ಪಾದಕರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾಪಡೆಗಳಿಂದ ಕಾರ್ಯಾಚರಣೆ –ಎಎನ್‌ಐ ಚಿತ್ರ
ಭಯೋತ್ಪಾದಕರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾಪಡೆಗಳಿಂದ ಕಾರ್ಯಾಚರಣೆ –ಎಎನ್‌ಐ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಉಗ್ರರು ಮತ್ತು ಭದ್ರತಾಪಡೆಗಳ ನಡುವಣ ಗುಂಡಿನ ಚಕಮಕಿ ಮಂಗಳವಾರ ಬೆಳಿಗ್ಗೆಯೂ ಮುಂದುವರಿದಿದೆ.

ಇಬ್ಬರು ಉಗ್ರರನ್ನು ಬೆಳಿಗ್ಗೆ ಹತ್ಯೆ ಮಾಡಲಾಗಿದ್ದು, ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಮೂವರು ಯೋಧರು ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿ ಮುಂದುವರಿದಿದೆ.

ಪುಲ್ವಾಮಾ ಜಿಲ್ಲೆಯ ಅರಿಹಲ್-ಲಸ್ಸಿಪೊರಾ ರಸ್ತೆಯಲ್ಲಿ ಸೇನಾಪಡೆಯ ಬೆಂಗಾವಲು ವಾಹನವನ್ನು ಗುರಿಯಾಗಿಸಿ ಸೋಮವಾರ ಉಗ್ರರು ಕಚ್ಚಾ ಸ್ಫೋಟಕ ಬಳಸಿ ದಾಳಿ ನಡೆಸಿದ್ದು, ಒಂಬತ್ತು ಯೋಧರು ಗಾಯಗೊಂಡಿದ್ದರು.

ADVERTISEMENT

ನಂತರ ಅನಂತನಾಗ್‌ ಜಿಲ್ಲೆಯ ಅಚಬಲ್‌ ಪ್ರದೇಶದ ಬಿದೂರ ಗ್ರಾಮದಲ್ಲಿ ಭಯೋತ್ಪಾದಕರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ವಿಶೇಷ ಕಾರ್ಯಪಡೆ ಮತ್ತು ರಾಷ್ಟ್ರೀಯ ರೈಫಲ್ಸ್ ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಆ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್‌ ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಹತರಾಗಿದ್ದರು. ಘಟನಾ ಸ್ಥಳ ಜಿಲ್ಲಾ ಕೇಂದ್ರದಿಂದ 65 ಕಿ.ಮೀ ದೂರದಲ್ಲಿತ್ತು. ಗುಂಡಿನ ಚಕಮಕಿ ಮಂಗಳವಾರ ಬೆಳಿಗ್ಗೆಯೂ ಮುಂದುವರಿದಿದೆ.

ಪ್ರತಿಭಟನೆ: ಸೋಮವಾರ ಗುಂಡಿನ ಚಕಮಕಿ ಅಂತ್ಯಗೊಂಡ ನಂತರ ಭದ್ರತಾಪಡೆಗಳ ವಿರುದ್ಧ ನಾಗರಿಕರು ಕಲ್ಲುತೂರಾಟ ನಡೆಸಿದ್ದಾರೆ. ಅಶ್ರುವಾಯು ಮತ್ತು ಪೆಲೆಟ್‌ ಬಂದೂಕಿನ ದಾಳಿ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.