ನವದೆಹಲಿ: ಲೋಕಸಭೆಯಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಕಾರಣಕ್ಕೆ ವಿರೋಧ ಪಕ್ಷಗಳ ಮತ್ತಿಬ್ಬರು ಸಂಸದರನ್ನು ಬುಧವಾರ ಅಮಾನತು ಮಾಡಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಮಂಡಿಸಿದ ನಿರ್ಣಯವನ್ನು ಸದನವು ಅಂಗೀಕರಿಸಿತು. ಆ ಬಳಿಕ ಕೇರಳದ ಕಾಂಗ್ರೆಸ್ (ಮಣಿ) ಸಂಸದ ಥಾಮಸ್ ಚಾಳಿಕಾಡನ್ ಮತ್ತು ಸಿಪಿಎಂ ಸಂಸದ ಎ.ಎಂ. ಆರಿಫ್ ಅವರನ್ನು ಅಮಾನತು ಮಾಡಲಾಯಿತು.
ಈ ಮೂಲಕ ಅಮಾನತುಗೊಂಡ ಲೋಕಸಭಾ ಸದಸ್ಯರ ಸಂಖ್ಯೆ 97ಕ್ಕೆ ಏರಿಕೆ ಆಗಿದೆ. ವಿರೋಧ ಪಕ್ಷಗಳ ಒಟ್ಟು 143 ಸಂಸದರು ಅಮಾನತಿನಲ್ಲಿದ್ದಾರೆ.
ಖರ್ಗೆ ಆರೋಪ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷವು ದೇಶದಲ್ಲಿ ಏಕ ಪಕ್ಷ ಆಡಳಿತ ಸ್ಥಾಪಿಸಲು ಬಯಸಿವೆ. ಇದೇ ಕಾರಣಕ್ಕಾಗಿ ಭಾರಿ ಸಂಖ್ಯೆಯಲ್ಲಿ ಸಂಸದನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸಂಸತ್ತಿನ ಭಾರಿ ಭದ್ರತಾ ವೈಫಲ್ಯದ ಕುರಿತು ಕೇಂದ್ರ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ ಕಾರಣಕ್ಕಾಗಿ ವಿಪಕ್ಷಗಳ ಸಂಸದರನ್ನು ಅಮಾನತಿನಲ್ಲಿ ಇರಿಸಲಾಗಿದೆ.
ಸಂಸತ್ ಒಳಗೆ ಪ್ರವೇಶಿಸಲು ಆಗಂತುಕರಿಗೆ ಪಾಸ್ ನೀಡಿದ ಬಿಜೆಪಿ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಇನ್ನೂ ಪ್ರಶ್ನಿಸಲಾಗಿಲ್ಲ. ಇದು ಯಾವ ರೀತಿಯ ತನಿಖೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರ್ತವ್ಯ ಲೋಪದ ಕಾರಣಕ್ಕಾಗಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ, ಸಂಸದರ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿದುಕೊಂಡು ಕೇಂದ್ರ ಸರ್ಕಾರವು ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
‘ಪ್ರಜಾಪ್ರಭುತ್ವ ಉಸಿರುಗಟ್ಟಿಸುತ್ತಿರುವ ಕೇಂದ್ರ’
ನವದೆಹಲಿ (ಪಿಟಿಐ): ಸಂಸತ್ತಿನಲ್ಲಿ ನ್ಯಾಯಬದ್ಧವಾದ ಬೇಡಿಕೆ ಇರಿಸಿದ ಕಾರಣಕ್ಕಾಗಿ ಸಂಸದರನ್ನು ಅಮಾನತು ಮಾಡುವ ಮೂಲಕ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಸಂವಿಧಾನ ಸದನದ (ಹಳೆ ಸಂಸತ್ ಕಟ್ಟಡ) ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು. ‘ಈಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ಆಗಿರುವ ನಿರಾಸೆಯನ್ನು ಲೋಕಸಭೆ ಚುನಾವಣೆಗೆ ಸಕಾರಾತ್ಮಕ ಬಲವನ್ನಾಗಿ ಬದಲಾಯಿಸಬೇಕು’ ಎಂದರು.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕುರಿತು ಇದೇ ಮೊದಲ ಬಾರಿಗೆ ಸೋನಿಯಾ ಅವರು ಮಾತನಾಡಿದ್ದಾರೆ. ‘ನಾವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ತಾಳ್ಮೆ, ದೃಢಚಿತ್ತವು ಸವಾಲು ಎದುರಿಸಲು ನಮಗೆ ಶಕ್ತಿ ನೀಡುತ್ತದೆ. ನಮ್ಮ ಸಿದ್ಧಾಂತ ಮತ್ತು ಮಾಲ್ಯಗಳು ಈ ಸಂದರ್ಭದಲ್ಲಿ ನಮಗೆ ದಾರಿ
ದೀಪವಾಗಲಿವೆ’ ಎಂದರು.
ಪ್ರತಿಭಟನೆ ನಾಳೆ
ನವದೆಹಲಿ: 143 ಸಂಸದರನ್ನು ಅಮಾನತಿನಲ್ಲಿ ಇರಿಸಿರುವುದನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಬುಧವಾರ ಘೋಷಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಪ್ರತಿಭಟನೆಯ ರೂಪುರೇಷೆಗಳನ್ನು ನಿರ್ಧರಿಸಲಾಯಿತು. ಅಮಾನತಿನಲ್ಲಿರುವ ಎಲ್ಲಾ ಸಂಸದರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಸಂಸದರು ಸಂಸತ್ತಿನ ಅಣಕು ಪ್ರದರ್ಶನ ನಡಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದನ್ನು ‘ಇಂಡಿಯಾ’ ನಾಯಕರು ತಳ್ಳಿಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.