ADVERTISEMENT

ರಾಮಲೀಲಾ ನಾಟಕ ಪ್ರದರ್ಶನ: ವಾನರ ವೇಷ ಧರಿಸಿದ್ದ ಇಬ್ಬರು ಕೈದಿಗಳು ಜೈಲಿನಿಂದ ಪರಾರಿ

ಏಜೆನ್ಸೀಸ್
Published 13 ಅಕ್ಟೋಬರ್ 2024, 14:18 IST
Last Updated 13 ಅಕ್ಟೋಬರ್ 2024, 14:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಲಖನೌ: ಉತ್ತರಾಖಂಡದ ಹರಿದ್ವಾರ ಜೈಲಿನಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ‘ರಾಮ್‌ಲೀಲಾ’ ನೃತ್ಯರೂಪಕ ಪ್ರದರ್ಶನದ ವೇಳೆ ವಾನರರ ವೇಷ ಧರಿಸಿದ್ದ ಇಬ್ಬರು ಕೈದಿಗಳು ಸೀತೆಯನ್ನು ಹುಡುಕುವ ನೆಪದಲ್ಲಿ ಜೈಲಿನಿಂದಲೇ ಪರಾರಿಯಾಗಿದ್ದಾರೆ.

ಇದೀಗ ಉತ್ತರಾಖಂಡ ಪೊಲೀಸರು ನಾಪತ್ತೆಯಾದ ಕೈದಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

ADVERTISEMENT

ಹರಿದ್ವಾರದ ರೋಷ್ನಾಬಾದ್‌ನಲ್ಲಿರುವ ಜೈಲಿನಲ್ಲಿ ನವರಾತ್ರಿ ಅಂಗವಾಗಿ ಪ್ರತಿ ವರ್ಷ ‘ರಾಮ್‌ಲೀಲಾ‘ ಆಯೋಜಿಸಿಕೊಂಡು ಬರುತ್ತಿದ್ದು, ಕೈದಿಗಳೇ ಇದರಲ್ಲಿ ಪಾತ್ರ ನಿರ್ವಹಿಸುತ್ತಾರೆ.

ಜೈಲಿನಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅಲ್ಲಿ ತಾತ್ಕಲಿಕವಾಗಿ ಮೆಟ್ಟಿಲು ನಿರ್ಮಿಸಲಾಗಿತ್ತು. ಇದೇ ಜಾಗದಿಂದ ಶುಕ್ರವಾರ ರಾತ್ರಿ ಮೆಟ್ಟಿಲು ಏರಿ, ನಂತರ ಗೋಡೆ ಹಾರಿ‌ ತಪ್ಪಿಸಿಕೊಂಡಿದ್ದಾರೆ. ಜೈಲಿನ ಆವರಣದಲ್ಲಿ ವ್ಯಾಪಕ ಶೋಧ ನಡೆಸಿದ ಜೈಲಿನ ಸಿಬ್ಬಂದಿ, ಇಬ್ಬರು ಪರಾರಿಯಾಗಿರುವುದು ಖಚಿತವಾದ ಬಳಿಕ ಶನಿವಾರ ಬೆಳಿಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮೂಲಗಳ ಪ್ರಕಾರ, ಪರಾರಿಯಾದ ಪಂಕಜ್ ಉತ್ತರಾಖಂಡ್‌ನ ರೂರ್ಕಿ ನಿವಾಸಿ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ರಾಜ್‌ಕುಮಾರ್‌ ಉತ್ತರಪ್ರದೇಶದ ಗೊಂಡ ಜಿಲ್ಲೆಯ ನಿವಾಸಿಯಾಗಿದ್ದು, ಅಪಹರಣ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿದ್ದ.

ಕೈದಿಗಳು ಪರಾರಿಯಾಗುವ ವೇಳೆ ಇತರ ಕೈದಿಗಳು ಹಾಗೂ ಸಿಬ್ಬಂದಿ ‘ರಾಮ್‌ಲೀಲಾ’ ನೋಡುವುದರಲ್ಲಿ ತಲ್ಲೀನರಾಗಿದ್ದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಅಡಿಯಲ್ಲಿ ಗಾರ್ಡ್‌ ಸೇರಿದಂತೆ ಜೈಲಿನ ಆರು ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. 

ಕೈದಿಗಳ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಕೈಗೆತ್ತಿಕೊಂಡಿರುವ ಪೊಲೀಸರು, ಸುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.