ಜೈಪುರ: 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕಲ್ಲಿದ್ದಲು ಕುಲುಮೆಯಲ್ಲಿ ಸಜೀವ ದಹನ ಮಾಡಿದ್ದ ಪ್ರಕರಣದಲ್ಲಿ ಇಬ್ಬರಿಗೆ ರಾಜಸ್ಥಾನದ ಭಿಲ್ವಾರದ ಪೋಕ್ಸೊ ನ್ಯಾಯಾಲಯ ಸೋಮವಾರ ಮರಣದಂಡನೆ ವಿಧಿಸಿ ಆದೇಶಿಸಿದೆ.
'ಕಾಲು ಮತ್ತು ಕನ್ಹಾ ಎಂಬುವವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ' ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮಹಾವೀರ್ ಸಿಂಗ್ ಕಿಷ್ನಾವತ್ ತಿಳಿಸಿದ್ದಾರೆ.
'ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ಈ ಅಪರಾಧ ಪ್ರಕರಣದಲ್ಲಿ ಈ ಇಬ್ಬರನ್ನು ದೋಷಿ ಎಂದು ನ್ಯಾಯಾಲಯ ಶನಿವಾರ ತೀರ್ಪು ನೀಡಿತ್ತು. ಅಲ್ಲದೇ ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ 7 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಖುಲಾಸೆಗೊಳಿಸಿರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು' ಎಂದು ಕಿಷ್ನಾವತ್ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಸಂತ್ರಸ್ತೆಯ ತಾಯಿ, ‘ನ್ಯಾಯ ಸಿಕ್ಕಿದೆ. ಆರೋಪಿಗಳಿಗೆ ನೀಡಿದ ಶಿಕ್ಷೆಯಿಂದ ತೃಪ್ತಿಯಾಗಿದೆ’ ಎಂದಿದ್ದಾರೆ.
‘ಪ್ರಕರಣ ವರದಿಯಾದಾಗ ನಮ್ಮ ಸರ್ಕಾರ ತಕ್ಷಣ ಕ್ರಮ ತೆಗೆದುಕೊಂಡಿತು. ಎಡಿಜಿ (ಅಪರಾಧ ವಿಭಾಗ) ಅವರನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತು. ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಒಂದು ತಿಂಗಳೊಳಗೆ ಈ ಪ್ರಕರಣದಲ್ಲಿ ಆರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಯಿತು. ಸುಮಾರು 10 ತಿಂಗಳೊಳಗೆ ಈ ಅಪರಾಧಿಗಳಿಗೆ ಶಿಕ್ಷೆಯಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಅಶೋಕ ಗೆಹಲೋತ್ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಆಗಸ್ಟ್ 2ರಂದು ದನ ಮೇಯಿಸಲು ಹೋಗಿದ್ದ ಬಾಲಕಿಯ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಎಸಗಿದ್ದರು. ನಂತರ ಆಕೆಗೆ ದೊಣ್ಣೆಯಿಂದ ಹೊಡೆದು, ಆಕೆ ಸತ್ತಿದ್ದಾಳೆಂದು ಪರಿಗಣಿಸಿ, ಆಕೆಯನ್ನು ಕಲ್ಲಿದ್ದಲಿನ ಕುಲುಮೆಗೆ ಎಸೆದು ಸುಟ್ಟುಹಾಕಿದ್ದರು. ಬಾಲಕಿಯ ಕೈಬಳೆಯನ್ನು ಸ್ಥಳೀಯರು ಗುರುತಿಸಿದ ನಂತರ ಸ್ಥಳದಿಂದ ಮೂಳೆಗಳನ್ನು ಹೊರತೆಗೆಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.