ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಕಚ್ಚಾಬಾಂಬ್ ದಾಳಿಯಲ್ಲಿ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಈ ಘಟನೆಯಲ್ಲಿ ಇತರ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಗಾಯಗೊಂಡ ನಾಲ್ವರು ಸಿಬ್ಬಂದಿಯನ್ನು ಮೊದಲು ಬಿಜಾಪುರದ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಯಿತು. ಆ ಬಳಿಕ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ರಾಜಧಾನಿ ರಾಯಪುರಕ್ಕೆ ವಿಮಾನದ ಮೂಲಕ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.
‘ನಕ್ಸಲರನ್ನು ಸಂಪೂರ್ಣವಾಗಿ ಸದೆಬಡೆಯಲು ರಾಜ್ಯ ಸರ್ಕಾರ ಕಾರ್ಯಾಚರಣೆ ತೀವ್ರಗೊಳಿಸಿದೆ. ಹೀಗಾಗಿ ನಕ್ಸಲರು ಹತಾಶೆಗೊಂಡಿದ್ದಾರೆ. ಇದೇ ಕಾರಣಕ್ಕಾಗಿ ನಕ್ಸಲರು ಈ ಕೃತ್ಯವೆಸಗಿದ್ದಾರೆ. ವೀರ ಯೋಧರ ಈ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು. ಈ ಕೃತ್ಯವೆಸಗಿದ ನಕ್ಸಲರನ್ನು ಸದೆಬಡೆಯುವವರೆಗೆ ಈ ಹೋರಾಟ ನಿಲ್ಲುವುದಿಲ್ಲ’ ಎಂದು ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ: ದರ್ಭ ಮತ್ತು ಪಶ್ಚಿಮ ಬಸ್ತರ್‌ನ ವಿಭಾಗಗಳಲ್ಲಿ ನಕ್ಸಲರು ಇದ್ದಾರೆ ಎಂಬ ಮಾಹಿತಿ ಮೇರೆಗೆ ವಿಶೇಷ ಕಾರ್ಯಪಡೆ, ಜಿಲ್ಲಾ ಮೀಸಲು ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಕೋಬ್ರಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು.
ಬಿಜಾಪುರ–ಸುಕ್ಮಾ–ದಂತೇವಾಡ ಜಿಲ್ಲೆಗಳು ಸಂಗಮವಾಗುವ ಅರಣ್ಯ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಗಿಸಿ, ವಾಪಸ್ ತೆರಳುತ್ತಿದ್ದ ಜಂಟಿ ಭದ್ರತಾ ತಂಡದ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಬುಧವಾರ ರಾತ್ರಿ ನಕ್ಸಲರು ಈ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನಕ್ಸಲ್ ಪಿಡುಗು ಮೂರು ವರ್ಷದಲ್ಲಿ ಇತ್ಯರ್ಥ’
ನಕ್ಸಲರ ಪಿಡುಗನ್ನು ಮೂರು ವರ್ಷಗಳಲ್ಲಿ ಹೋಗಲಾಡಿಸಲಾಗುವುದು ಎಂದು ಛತ್ತೀಸಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಗುರುವಾರ ತಿಳಿಸಿದ್ದಾರೆ. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ನಕ್ಸಲರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಮೂಲಕ ಮೂರು ವರ್ಷಗಳ ಒಳಗೆ ನೀವೆಲ್ಲರೂ ಇಂದ್ರವತಿ ನದಿಯ ದಂಡೆಗಳ ಮೇಲೆ ನೆಮ್ಮದಿಯಿಂದ ಕುಳಿತುಕೊಳ್ಳಲು ಸಾಧ್ಯವಾಗಲಿದೆ. ಇದು ಗಟ್ಟಿ ನಾಯಕತ್ವದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಂದ ಸಾಧ್ಯವಾಗಲಿದೆ’ ಎಂದು ಭರವಸೆ ನೀಡಿದರು. ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ನೇತೃತ್ವದ ಬಿಜೆಪಿ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿದೆ ಎಂದು ಇದೇ ವೇಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.