ಜಮ್ಮು:ಇಬ್ಬರು ಶಂಕಿತ ಪಾಕ್ ಗೂಢಚಾರರನ್ನು ಜಮ್ಮು ಮತ್ತು ಕಾಶ್ಮೀರದ ರತನೂಚಕ್ ಸೇನಾ ನೆಲೆ ಆವರಣದಲ್ಲಿ ಬಂಧಿಸಲಾಗಿದೆ. ಬಂಧಿತರು ಸೇನಾ ನೆಲೆಯ ಫೋಟೊ ತೆಗೆಯುವುದರ ಜತೆಗೆ ವಿಡಿಯೊ ಮಾಡುತ್ತಿದ್ದರು.
ಶಂಕಿತರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಜಂಟಿ ವಿಚಾರಣಾ ಕೇಂದ್ರದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರತನೂಚಕ್ ಸೇನಾ ನೆಲೆ ಸುತ್ತ ಗಸ್ತು ತಿರುಗುತ್ತಿದ್ದಾಗ ಶಂಕಿತರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅವರನ್ನು ಬಂಧಿಸಲಾಯಿತು. ಈ ಪೈಕಿ ಒಬ್ಬಾತ ಕಠುವಾ ಮತ್ತು ಇನ್ನೊಬ್ಬ ಡೋಡಾ ಮೂಲದವ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಜತೆ ನಿರಂತರ ಸಂಪರ್ಕ:ಬಂಧಿತರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಲಾಗಿದೆ. ಅವರು ಪಾಕಿಸ್ತಾನದಲ್ಲಿರುವ ಕೆಲವರ ಜತೆ ನಿರಂತರ ಸಂಪರ್ಕದಲ್ಲಿದ್ದುದು ತಿಳಿದುಬಂದಿದೆ. ಬಂಧನಕ್ಕೊಳಗಾಗುವುದಕ್ಕೂ ಕೆಲವೇ ಗಂಟೆ ಮುನ್ನ ಕೆಲವು ವಿಡಿಯೊಗಳನ್ನು ಪಾಕಿಸ್ತಾನದ ವ್ಯಕ್ತಿಗಳಿಗೆ ಶೇರ್ ಮಾಡಿದ್ದರು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.