ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಮತ್ತು ದೊಡಾ ಜಿಲ್ಲೆಗಳಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಭಾರಿ ಪ್ರಮಾಣದ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಈ ವೇಳೆ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದು, ಭದ್ರತಾ ಪಡೆಯ ಆರು ಸಿಬ್ಬಂದಿಗೆ ಗಾಯಗಳಾಗಿವೆ.
ಸೈದಾ ಸುಖಲ್ ಗ್ರಾಮದಲ್ಲಿ ಇಬ್ಬರು ಭಯೋತ್ಪಾದಕರು ಕಾಣಿಸಿಕೊಂಡ ಬಳಿಕ ಮಂಗಳವಾರ ರಾತ್ರಿಯಿಂದ ಸುಮಾರು 15 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಭದ್ರತಾ ಪಡೆಗಳ ವಾಹನಗಳ ಮೇಲೆ ಉಗ್ರರು ಬುಲೆಟ್ ದಾಳಿಯನ್ನೂ ನಡೆಸಿದರು. ಅದೃಷ್ಟವಶಾತ್ ಇಬ್ಬರು ಹಿರಿಯ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಂದೆಡೆ, ದೋಡಾ ಜಿಲ್ಲೆಯ ಭದರ್ವಾ–ಪಠಾಣ್‌ಕೋಟ್ ಹೆದ್ದಾರಿಯ ಚಟರ್ಗಲ್ಲಾ ಪ್ರದೇಶದ ಚೆಕ್‌ಪೋಸ್ಟ್ ಮೇಲೆ ಭಯೋತ್ಪಾದಕರು ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ರಾಷ್ಟ್ರೀಯ ರೈಫಲ್ಸ್‌ನ ಐವರು ಯೋದರು ಮತ್ತು ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಗಾಯಗೊಂಡಿದ್ದಾರೆ.
ಶಾಂತಿ ಕದಡಲು ಪಾಕ್ ಕುತಂತ್ರ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣವನ್ನು ಕದಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಇದರಿಂದ ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಥುವಾದ ಸೈದಾ ಸುಖಲ್ ಗ್ರಾಮವು ಅಂತರರಾಷ್ಟ್ರೀಯ ಗಡಿಯಿಂದ 60 ಕಿ.ಮೀ ದೂರದಲ್ಲಿದೆ. ಇಲ್ಲಿ ಅಡಗಿದ್ದ ಭಯೋತ್ಪಾದಕರ ವಿರುದ್ಧ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಇಬ್ಬರು ಉಗ್ರರನ್ನು ಕೊಂದಿವೆ. ಈ ವೇಳೆ ಮಧ್ಯ ಪ್ರದೇಶದ ನಿವಾಸಿ, ಸಿಆರ್‌ಪಿಎಫ್ ಯೋಧ ಕಬೀರ್ ದಾಸ್ ತೀವ್ರ ಗಾಯಗೊಂಡು, ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಭಯೋತ್ಪಾದಕರು ಗ್ರಾಮಕ್ಕೆ ನುಗ್ಗಿ, ಮನೆಯೊಂದರಿಂದ ನೀರು ಕೇಳಿದ್ದಾರೆ. ಈ ಬಗ್ಗೆ ಆತಂಕಗೊಂಡ ಗ್ರಾಮದ ಜನರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದನ್ನು ಆಧರಿಸಿ, ತಕ್ಷಣವೇ ಕಾರ್ಯಾಚರಣೆ ಕೈಗೊಳ್ಳಲಾಯಿತು. ಭಯೋತ್ಪಾದಕರು ಗ್ರೆನೇಡ್ ಎಸೆಯಲು ಪ್ರಯತ್ನಿಸಿದರು, ಆಗ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆಯಾದರು. ಉಗ್ರರ ದಾಳಿಯಲ್ಲಿ ಒಬ್ಬ ನಾಗರಿಕರಿಗೂ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಜಮ್ಮು ವಲಯ) ಆನಂದ್ ಜೈನ್ ವಿವರಿಸಿದ್ದಾರೆ.
ಶಸ್ತ್ರಾಸ್ತ್ರ ವಶ: ಹತ್ಯೆಯಾದ ಇಬ್ಬರು ಉಗ್ರರು ಪಾಕಿಸ್ತಾನದವರು ಎಂದು ಹೇಳಲಾಗಿದೆ. ಎನ್‌ಕೌಂಟರ್ ನಡೆದ ಪ್ರದೇಶದಿಂದ ಎಂ4 ಕಾರ್ಬೈನ್ ಎಕೆ ಅಸಾಲ್ಟ್ ರೈಫಲ್ ಮದ್ದುಗುಂಡುಗಳು ಮತ್ತು ₹ 1 ಲಕ್ಷ ನಗದು ಜತೆಗೆ ಪಾಕಿಸ್ತಾನ ನಿರ್ಮಿತ ಆಹಾರ ಪದಾರ್ಥಗಳು ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕರ ಗುರುತು ಮತ್ತು ಅವರು ಯಾವ ಗುಂಪಿನೊಂದಿಗೆ ಸಂಬಂಧ ಹೊಂದಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಿವ ಖೋರಿ ದೇವಾಲಯಕ್ಕೆ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಕೆಲ ದಿನಗಳಲ್ಲಿ ಈ ಎರಡೂ ಉಗ್ರರ ದಾಳಿಗಳು ನಡೆದಿವೆ. ಬಸ್ ಮೇಲೆ ಭಾನುವಾರ ಸಂಜೆ ಉಗ್ರರ ದಾಳಿ ನಡೆದಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಆಳವಾದ ಕಂದರಕ್ಕೆ ಬಿದ್ದಿತ್ತು. ಈ ದುರಂತದಲ್ಲಿ 9 ಮಂದಿ ಯಾತ್ರಿಗಳು ಮೃತಪಟ್ಟು 41 ಜನರು ಗಾಯಗೊಂಡಿದ್ದರು. ಬಸ್ ಮೇಲೆ ದಾಳಿ ನಡೆಸಿದ ಉಗ್ರರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು ಒಬ್ಬ ಉಗ್ರನ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಸುಳಿವು ನೀಡಿದವರಿಗೆ ₹ 20 ಲಕ್ಷ ಬಹುಮಾನವನ್ನೂ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.