ADVERTISEMENT

ಕೇರಳ ನೆರೆ ಸಂತ್ರಸ್ತರಿಗೆ ಅಮೆರಿಕದಲ್ಲಿ ₹10.5 ಕೋಟಿ ದೇಣಿಗೆ ಸಂಗ್ರಹಿಸಿದ ಯುವಕರು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 14:41 IST
Last Updated 24 ಆಗಸ್ಟ್ 2018, 14:41 IST
ಅರುಣ್‌ ಮತ್ತು ಅಜುಮೊನ್‌
ಅರುಣ್‌ ಮತ್ತು ಅಜುಮೊನ್‌   

ವಾಷಿಂಗ್ಟನ್‌: ಅಮೆರಿಕದಲ್ಲಿ ನೆಲೆಸಿರುವ ಕೇರಳ ಮೂಲದ ಇಬ್ಬರು ಯುವಕರು ಕೇರಳದ ನೆರೆ ಸಂತ್ರಸ್ತರಿಗಾಗಿ ಕ್ರೌಡ್‌ಫಂಡಿಂಗ್‌ ಮೂಲಕ ₹10.5 ಕೋಟಿ ಸಂಗ್ರಹಿಸಿ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ.

ಭೀಕರ ಮಳೆ ಅವಾಂತರಕ್ಕೆ ತತ್ತರಿಸಿರುವ, ಜನರು ಮನೆ ಮಠಗಳನ್ನು ಕಳೆದಕೊಂಡು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸುದ್ದಿ ತಿಳಿದ ಈ ಯುವಕರು ಸಾವಿರಾರು ಮೈಲಿ ದೂರದ ಅಮೆರಿಕದಲ್ಲಿ ಸುಮ್ಮನೆ ಕೂರಲಿಲ್ಲ! ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ಕೇರಳದ ನೆರವಿಗಾಗಿ ಕ್ರೌಡ್‌ಫಂಡಿಂಗ್ ಅಭಿಯಾನ ಆರಂಭಿಸಿದರು. ಕೇವಲ 8 ದಿನಗಳಲ್ಲಿ ₹ 10.5 ಕೋಟಿ ಸಂಗ್ರಹಿಸಿದ್ದು, ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಈ ಹಣವನ್ನು ಕೊಡಲಿದ್ದಾರೆ ಎಂದು ದಿ ನ್ಯೂಸ್‌ ಮಿನಿಟ್‌ ಸುದ್ದಿ ತಾಣ ವರದಿ ಮಾಡಿದೆ.

ಚಿಕಾಗೋದಲ್ಲಿ ವ್ಯಾಪಾರದ ಜತೆಗೆ ನವೋದ್ಯಮವೊಂದನ್ನು ನಡೆಸುತ್ತಿರುವ ಅರುಣ್‌ ನೆಲ್ಲಾ ಈ ದೇಣಿಗೆ ಸಂಗ್ರಹದ ಸೂತ್ರದಾರ. ಈ ಐಡಿಯಾ ಹೊಳೆದದ್ದೇ ತಡ ಅದನ್ನು ಗೆಳೆಯರೊಂದಿಗೆ ಹಂಚಿಕೊಂಡು ಕಾರ್ಯಪ್ರವೃತ್ತರಾದ ಬಗ್ಗೆ ಅರುಣ್ ಹೇಳುತ್ತಾರೆ. ಚಿಕಾಗೋದಲ್ಲಿ ನೆಲೆಸಿರುವ ಮತ್ತೊಬ್ಬ ಯುವಕ ಅಜುಮೊನ್‌ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

ADVERTISEMENT

ಅಮೆರಿಕದಿಂದ ಕೇರಳ ಮೂಲದ ಯುವಕರಿಬ್ಬರು ಮುಖ್ಯಮಂತ್ರಿ ಪರಿಹಾರ ನಿಧಿಗೆ ₹10.5 ಕೋಟಿ ದೇಣಿಗೆ ನೀಡಲಿದ್ದಾರೆ ಎಂಬ ಸುದ್ದಿ ತಿಳಿದ ಬಳಿಕ ಕೇರಳದ ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಂ. ಶಿವಶಂಕರ್‌ ಆ ಯುವಕರನ್ನು ಅಭಿನಂದಿಸಿ ಪತ್ರ ಅವರಿಗೆ ಬರೆದಿದ್ದಾರೆ. ಹಾಗೇ ಅವರನ್ನು ಕೇರಳಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.

’ನಿಮ್ಮನ್ನು ಕೇರಳಕ್ಕೆ ಆಹ್ವಾನಿಸುತ್ತಿರುವುದು ನಮಗೆ ಸಂತಸವಾಗಿದೆ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಅವರಿಂದ ಗೌರವ ಸ್ವೀಕರಿಸುವಂತೆ ಕೋರಿದ್ದಾರೆ. ಭೇಟಿ ಸಂದರ್ಭದಲ್ಲಿ ನವೋದ್ಯಮಿಗಳ ಜೊತೆಗೆ ಸಂವಹನ ಸಭೆ ಆಯೋಜಿಸಲಾಗುವುದು. ಆ ಮೂಲಕ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಫೇಸ್‌ಬುಕ್‌ ಮೂಲಕ ದೇಣಿಗೆ ಸಂಗ್ರಹಿಸುವ ಅಭಿಯಾನ ನಡೆಸಿದ್ದು ಹೊಸತಾಗಿದೆ. ಇದು ಕೆಲವೇ ದೇಶಗಳಿಗೆ ಮಾತ್ರ ಸೀಮಿತವಾಗಿದೆ. ದೇಣಿಗೆ ಸಂಗ್ರಹದ ಕೆಲಸವನ್ನು ಎಲ್ಲಾ ಗೆಳೆಯರು ಸಮಾನವಾಗಿ ಹಂಚಿಕೊಂಡು ಅಭಿಯಾನ ನಡೆಸಿದೆವು. ಅಮೆರಿಕದಲ್ಲಿನ ಸುಮಾರು 30 ಸಾವಿರ ಜನರು ನೆರವು ನೀಡಿದ್ದಾರೆ. ಬಹುತೇಕ ಕೇರಳದವರೇ ಹೆಚ್ಚಿನ ಹಣಕಾಸು ದೇಣಿಗೆ ಕೊಟ್ಟಿದ್ದಾರೆ. ಇವರ ಜತೆಗೆ ಅನಿವಾಸಿ ಭಾರತೀಯರು ಮತ್ತು ವಿದೇಶಿಯರು ಕೂಡ ಆರ್ಥಿಕ ಸಹಾಯ ಮಾಡಿದ್ದಾರೆ ಎಂದು ಅರುಣ್‌ ವಿವರಿಸಿದರು.

ನಾನು ದೇಣಿಗೆ ಸಂಗ್ರಹ ಅಭಿಯಾನಕ್ಕೆ ವೈಯಕ್ತಿಕವಾಗಿ 200 ಜನರಿಗೆ ಮಾತ್ರ ಆಮಂತ್ರಣ ಕಳುಹಿಸಿದ್ದೆ. ಆದರೆ ಈ ಅಭಿಯಾನ ಮುಕ್ತಾಯಗೊಳ್ಳುವ ದಿನಕ್ಕೆ 1 ಲಕ್ಷ ಜನರಿಗೆ ಆಮಂತ್ರಣ ತಲುಪಿತ್ತು. ಈ ಅಭಿಯಾನವನ್ನು ಕಳೆದ ಸೋಮವಾರವೇ ಮುಕ್ತಾಯಗೊಳಿಸಲಾಯಿತು. ಇದನ್ನು ಮತ್ತೆ ಆರಂಭಿಸುವಂತೆ ಸಾಕಷ್ಟು ಜನರು ಕೇಳುತ್ತಿದ್ದಾರೆ ಎಂದು ಅರುಣ್‌ ಹೇಳುತ್ತಾರೆ.

ಅರುಣ್‌ ಪೋಷಕರು ಕೊಟ್ಟಾಯಂನಲ್ಲಿ ನೆಲೆಸಿದ್ದಾರೆ.ಇಲ್ಲಿ ಮಳೆ ಅವಾಂತರಕ್ಕೆ ಸಾಕಷ್ಟು ಹಾನಿಯಾಗಿದೆ. ’ಕೆಲ ದಿನಗಳ ಹಿಂದಷ್ಟೇ ನಮ್ಮ ಪೋಷಕರು ಇಲ್ಲಿಗೆ ಬಂದಿದ್ದಾರೆ, ನನ್ನ ಪತ್ನಿ ಮತ್ತು ಮಗಳು ಕೂಡ ನನ್ನ ಜತೆಗೆ ಇದ್ದಾರೆ. ಕೇರಳದ ನೆರೆ ಪರಿಸ್ಥಿತಿಯನ್ನು ಅರಿತು ಕಳೆದ ಕೆಲವು ದಿನಗಳಿಂದ ಸಾಕಷ್ಟು ಕೆಲಸ ಮಾಡಿದೆ. ಇದಕ್ಕೆ ನನ್ನ ಕುಟುಂಬದವರು ಸಹಕಾರ ನೀಡಿದರು’ ಎಂದು ಅರುಣ್‌ ಹೇಳುತ್ತಾರೆ.

ಅಜುಮೊನ್‌ ಕೂಡ ಕೊಟ್ಟಾಯಂನವರು, ಅಭಿಯಾನ ಆರಂಭಿಸಿದಾಗನಮಗೆ ಜನರು ಇದನ್ನು ಗಮನಿಸುತ್ತಾರೆ ಎಂಬ ನಂಬಿಕೆ ಇರಲಿಲ್ಲ, ಕೆಲವರು ಇದನ್ನು ತಪ್ಪಾಗಿ ಭಾವಿಸುತ್ತಾರೆನೋ ಎಂಬ ಅಂಜಿಕೆ ಇತ್ತು. ಅದಕ್ಕಾಗಿ ಒಬ್ಬರ ಹೆಸರಿಗೆ ಬದಲಿ ಇಬ್ಬರ ಹೆಸರ ನೀಡಲು ಮುಂದಾದೆ. ಈ ವೇಳೆ ಅಜುಮೊನ್ ನನ್ನ ಜತೆ ಸೇರಿದರು.ಮುಂದಿನ ವಾರ ಕೇರಳಕ್ಕೆ ಬಂದು ಮುಖ್ಯಮಂತ್ರಿ ಅವರಿಗೆ ದೇಣಿಗೆ ಹಣವನ್ನು ನೇರವಾಗಿ ನೀಡುವುದಾಗಿ ಅರುಣ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.