ADVERTISEMENT

ನೌಕಾಪಡೆ ಇಬ್ಬರು ಮಹಿಳಾ ಅಧಿಕಾರಿಗಳಿಂದ ವಿಶ್ವಪರ್ಯಟನೆ

ಐಎನ್‌ಎಸ್‌ ತಾರಿಣಿಯಲ್ಲಿ ಯಾನ * ಸಂಶೋಧನೆಗಾಗಿ ದತ್ತಾಂಶ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 23:32 IST
Last Updated 2 ಅಕ್ಟೋಬರ್ 2024, 23:32 IST
   

ನವದೆಹಲಿ: ಭಾರತೀಯ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ವಿಶ್ವ ಪರ್ಯಟನೆಯನ್ನು ಬುಧವಾರ ಆರಂಭಿಸಿದರು.

ಯುದ್ಧನೌಕೆ ಐಎನ್‌ಎಸ್‌ ತಾರಿಣಿ ಮೂಲಕ ಆರಂಭಿಸಿರುವ ಎಂಟು ತಿಂಗಳ ಈ ಸಮುದ್ರಯಾನದ ವೇಳೆ, ಭಾರತೀಯ ವಿಜ್ಞಾನಿಗಳು ಕೈಗೊಂಡಿರುವ ಅಧ್ಯಯನಕ್ಕಾಗಿ ಬೃಹತ್‌ ಜಲಚರಗಳು ಹಾಗೂ ಮೈಕ್ರೊ ಪ್ಲಾಸ್ಟಿಕ್‌ನಿಂದಾಗುವ ಮಾಲಿನ್ಯ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ.

ಲೆಫ್ಟಿನೆಂಟ್‌ ಕಮಾಂಡರ್ ಕೆ.ದಿಲ್ನಾ ಹಾಗೂ ಲೆಫ್ಟಿನೆಂಟ್‌ ಕಮಾಂಡರ್ ಎ.ರೂಪಾ ಈ ಸಾಹಸಯಾತ್ರೆ ಆರಂಭಿಸಿರುವ ಅಧಿಕಾರಿಗಳು.

ADVERTISEMENT

ಇವರ ಕಡಲಯಾನಕ್ಕೆ ಹಸಿರುನಿಶಾನೆ ತೋರಿ, ಮಾತನಾಡಿದ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್‌ ತ್ರಿಪಾಠಿ, ‘ಈ ಇಬ್ಬರು ಅಧಿಕಾರಿಗಳು ಕೈಗೊಂಡಿರುವ ಯಾನವು, ಮಹಿಳೆಯರ ಕುರಿತಾದ ಸಾಮಾಜಿಕ ನಂಬಿಕೆಗಳ ವಿರುದ್ಧ ದನಿ ಎತ್ತಿರುವ ಭಾರತವನ್ನು ಹಾಗೂ ಹೊಸದರ ಅನ್ವೇಷಣೆಯನ್ನು ಪ್ರತಿನಿಧಿಸುತ್ತಾರೆ’ ಎಂದರು.

ಏಳು ವರ್ಷಗಳ ಹಿಂದೆ, ನೌಕಾಪಡೆಯ 6 ಮಹಿಳಾ ಅಧಿಕಾರಿಗಳನ್ನು ಒಳಗೊಂಡ ಕಡಲಯಾನದ ನಂತರ ನಡೆಯುತ್ತಿರುವ ಎರಡನೇ ಯಾತ್ರೆ ಇದಾಗಿದೆ. ಆಗ ಕೂಡ ಐಎನ್‌ಎಸ್‌ ತಾರಿಣಿ ನೌಕೆಯನ್ನು ಬಳಸಲಾಗಿತ್ತು.

ಕಡಲಯಾನದ ಉದ್ದೇಶಗಳು

* ಮಹಿಳಾ ಅಧಿಕಾರಿಗಳು ಭೂಮಧ್ಯರೇಖೆಯನ್ನು ಎರಡು ಬಾರಿ ದಾಟುವರು

* ವಿಶ್ವದ ಅತ್ಯಂತ ಅಪಾಯಕಾರಿ ಹಾಗೂ ನಿರ್ಜನ ಪ್ರದೇಶಗಳ ಮೂಲಕವೂ ಯಾನ

* ಪಣಜಿ ಮೂಲದ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಕೈಗೊಳ್ಳಲಿರುವ ಅಧ್ಯಯನಕ್ಕಾಗಿ ಮಾದರಿಗಳ ಸಂಗ್ರಹ

* ಸಾಗರಗಳಲ್ಲಿನ ಕಬ್ಬಿಣಾಂಶ ಹಾಗೂ ಮೈಕ್ರೊಪ್ಲಾಸ್ಟಿಕ್‌ಗಳಿಂದಾಗುವ ಪರಿಣಾಮ ಕುರಿತ ಅಧ್ಯಯನ

* ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ ಕೈಗೊಂಡಿರುವ ಪ್ರಾಜೆಕ್ಟ್‌ಗಾಗಿ ಬೃಹತ್‌ ಜಲಚರ ಪ್ರಾಣಿಗಳ ಕುರಿತು ಮಾಹಿತಿ ಸಂಗ್ರಹ

ಯಾತ್ರೆಯ ಪ್ರಮುಖಾಂಶಗಳು

* ಲೆಫ್ಟಿನೆಂಟ್‌ ಕಮಾಂಡರ್‌ಗಳಾದ ದಿಲ್ನಾ ಹಾಗೂ ರೂಪಾ ಅವರು 45–50 ದಿನಗಳ ನಂತರ ಆಸ್ಟ್ರೇಲಿಯಾದ ಫ್ರಿಮ್ಯಾಂಟಲ್‌ ತಲುಪುವರು

* ನಂತರ ಅವರು ನ್ಯೂಜಿಲೆಂಡ್‌ನ ಲಿಟ್ಲಟನ್‌ ನಂತರ ಪೋರ್ಟ್‌ ಸ್ಟ್ಯಾನ್ಸಿ (ಫಾಕ್‌ಲ್ಯಾಂಡ್‌) ಕೇಪ್‌ ಟೌನ್‌ (ದಕ್ಷಿಣ ಆಫ್ರಿಕಾ) ಮೂಲಕ ಸಾಗಿ ಗೋವಾಕ್ಕೆ ಮರಳುವರು

* ಈ ಸಾಹಸಯಾತ್ರೆಗಾಗಿ ಈ ಇಬ್ಬರು ಅಧಿಕಾರಿಗಳು ಆಳ ಸಮುದ್ರದಲ್ಲಿ ಅಧ್ಯಯನ ಸೇರಿದಂತೆ ಮೂರು ವರ್ಷಗಳಷ್ಟು ಕಠಿಣ ತರಬೇತಿ ಪಡೆದಿದ್ದಾರೆ

* ಮುಂದಿನ ವರ್ಷ ಮೇ ವೇಳೆಗೆ ಭಾರತಕ್ಕೆ ಮರಳುವ ನಿರೀಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.