ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಜವಳಿ ಕಾರ್ಖಾನೆಯೊಂದರಲ್ಲಿ ವಿಷಯುಕ್ತ ಅನಿಲ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಏಳು ಮಂದಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಹಮದಾಬಾದ್ ನಗರದ ನರೋಲ್ ಕೈಗಾರಿಕಾ ಪ್ರದೇಶದಲ್ಲಿರುವ ‘ದೇವಿ ಸಿಂಥೆಟಿಕ್ಸ್’ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ.
‘ಕಾರ್ಖಾನೆಯಲ್ಲಿ ಆ್ಯಸಿಡ್ ಅನ್ನು ಟ್ಯಾಂಕ್‌ಗೆ ವರ್ಗಾಯಿಸುವ ವೇಳೆ ಅನಿಲ ಸೋರಿಕೆಯಾಗಿದ್ದು, ಒಂಬತ್ತು ಮಂದಿ ಕಾರ್ಮಿಕರ ಉಸಿರಾಟಕ್ಕೆ ತೊಂದರೆಯಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಉಳಿದ ಏಳು ಕಾರ್ಮಿಕರಲ್ಲಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ’ ಎಂದು ಪೊಲೀಸ್ ಉಪ ಆಯುಕ್ತ ರವಿ ಮೋಹನ್ ಹೇಳಿದ್ದಾರೆ.
‘ಬಟ್ಟೆಯ ಪ್ರಿಟಿಂಗ್ ಮತ್ತು ಡೈಯಿಂಗ್‌ಗೆ ಬಳಸುವ ಸ್ಪೆಂಟ್ ಆ್ಯಸಿಡ್ ಅನ್ನು ಟ್ಯಾಂಕ್‌ಗೆ ವರ್ಗಾಯಿಸುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅವಘಡ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.