ಕೋಲ್ಕತ್ತ: ಕಪ್ಪು ವರ್ಣದ ಜನರನ್ನು ಅವಹೇಳನ ಮಾಡುವಂತಹ ಭಾಗ ಹೊಂದಿದ್ದ ಇಂಗ್ಲಿಷ್ ವರ್ಣಮಾಲೆಯ ಪುಸ್ತಕದಿಂದ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೆ ಬೋಧಿಸಿದ ಆರೋಪದ ಮೇಲೆ ಬುರ್ದ್ವಾನ್ ಜಿಲ್ಲೆಯ ಇಬ್ಬರು ಶಿಕ್ಷಕಿಯರನ್ನು ಪಶ್ಚಿಮ ಬಂಗಾಳ ಸರ್ಕಾರ ಅಮಾನತು ಮಾಡಿದೆ.
ಪುಸ್ತಕದಲ್ಲಿ ವರ್ಣಮಾಲೆ ಅಕ್ಷರದ ಜತೆ ಅದಕ್ಕೆ ಹೊಂದುವ ಪದ ಹಾಗೂ ಚಿತ್ರಗಳನ್ನು ಮುದ್ರಿಸಲಾಗಿದೆ. ‘ಯು’ ಅಕ್ಷರಕ್ಕೆ ‘ಅಗ್ಲಿ’ (ಕುರೂಪಿ, ಅವಲಕ್ಷಣ ಎಂಬ ಅರ್ಥ) ಎಂಬ ಪದ ಬಳಸಲಾಗಿದ್ದು, ಇದರ ಪಕ್ಕದಲ್ಲಿ ಕಪ್ಪು ವರ್ಣದ ಬಾಲಕನ ಚಿತ್ರ ಮುದ್ರಿಸಲಾಗಿದೆ.
‘ಈ ಪುಸ್ತಕವು ರಾಜ್ಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಲ್ಲ. ಪುಸ್ತಕವನ್ನು ಶಿಕ್ಷಕಿಯರು ಕೆಲಸ ಮಾಡುತ್ತಿರುವ ಶಾಲೆ ಹೊರತಂದಿದೆ. ಮಕ್ಕಳ ಮನಸ್ಸಿನಲ್ಲಿ ಪೂರ್ವಗ್ರಹ ಉಂಟು ಮಾಡುವ ಯತ್ನಗಳನ್ನು ನಾವು ಸಹಿಸುವುದಿಲ್ಲ’ ಎಂದು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಆಧರಿಸಿ, ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿರುವ ಶಾಲೆಯ ಶಿಕ್ಷಕಿಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿ ಇರಿಸಲಾಗಿದೆ. ಇಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಲಾಕ್‌ಡೌನ್ ಕಾರಣದಿಂದ ಶಾಲೆಯನ್ನು ಮುಚ್ಚಲಾಗಿದೆ. ಮನೆಯಲ್ಲಿ ಈ ಪುಸ್ತಕದಿಂದ ಬೋಧಿಸುತ್ತಿದ್ದ ಪೋಷಕರೊಬ್ಬರ ಗಮನಕ್ಕೆ ಇದು ಬಂದಿದೆ. ಅವರು ಉಳಿದ ಪೋಷಕರಿಗೆ ತಿಳಿಸಿದ್ದಾರೆ. ಕೊನೆಗೆ ಶಿಕ್ಷಣ ಇಲಾಖೆಯ ಗಮನಕ್ಕೂ ತಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.