ADVERTISEMENT

ಈಶಾನ್ಯದ ಆಧಿಪತ್ಯಕ್ಕೆ ಹೋರಾಟ

ಪೌರತ್ವ ಮಸೂದೆ, ಪ್ರಾದೇಶಿಕ ಅಸ್ಮಿತೆಯೇ ಚುನಾವಣೆಯ ಮುಖ್ಯ ವಿಚಾರಗಳು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 18:49 IST
Last Updated 27 ಮಾರ್ಚ್ 2019, 18:49 IST
   

ಗುವಾಹಟಿ: ಚುನಾವಣೆ ಎಂದರೆ ಭರವಸೆಗಳ ಮೇಳ. ಭಾರತದ ಈಶಾನ್ಯ ರಾಜ್ಯಗಳನ್ನು ಕುರಿತು ಹೇಳುವುದಾದರೆ, ಪ್ರಮುಖ ಸಮಸ್ಯೆಗಳ ವಿಚಾರದಲ್ಲಿ ಎಲ್ಲ ಪಕ್ಷಗಳದ್ದೂ ಯೂ–ಟರ್ನ್ ಹಾಗೂ ನಿರ್ಲಕ್ಷ್ಯದ ಧೋರಣೆ.

ಈಶಾನ್ಯ ರಾಜ್ಯಗಳನ್ನು ಯಾವುದೇ ಕ್ಷಣದಲ್ಲಿ ಹೊತ್ತಿ ಉರಿಸಬಲ್ಲ ಪ್ರಮುಖ ಸಮಸ್ಯೆಗಳು ಹಾಗೆಯೇ ಇವೆ. 2014ರ ಚುನಾವಣೆ ಬಳಿಕ ಅಂತಹ ಬದಲಾವಣೆಯನ್ನೇನೂಕಂಡಿಲ್ಲ ಎಂಬುದು ಎಂ.ಫಿಲ್ ವಿದ್ಯಾರ್ಥಿ ಸಂಜೀಬ್‌ ತಾಲೂಕ್‌ದಾರ್ ಅವರ ಅಭಿಪ್ರಾಯ.

‘ಮೂಲಸೌಕರ್ಯಗಳಿಗಿಂತ ಹೆಚ್ಚಾಗಿ ಸಮುದಾಯಗಳ ಅಸ್ಮಿತೆಯೇ (ಐಡೆಂಟಿಟಿ) ಇಲ್ಲಿ ಮುಖ್ಯವಾಗಿದೆ. ಕದನ ವಿರಾಮ ಮಾಡಿಕೊಳ್ಳಲು ಬಂಡುಕೋರ ಸಂಘಟನೆಗಳ ಜತೆ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಒಪ್ಪಂದ ಏರ್ಪಟ್ಟಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್) ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅಸ್ಸಾಮಿನ ಆರು ಸಮುದಾಯಗಳು ಬುಡಕಟ್ಟು ಸ್ಥಾನಮಾನಕ್ಕಾಗಿ ಕಾಯುತ್ತಿವೆ. ಅರುಣಾಚಲ ಪ್ರದೇಶದಲ್ಲಿ ಚಕ್ಮಾ ಸಮುದಾಯವು ನಿರಾಶ್ರಿತ ಸ್ಥಾನಮಾನಕ್ಕೆ ಕಾದು ಕುಳಿತಿದೆ. ಕಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ನೀಡಿಕೆ ವಿಚಾರವು ಅರುಣಾಚಲ ಪ್ರದೇಶದಲ್ಲಿ ಇತ್ತೀಚೆಗೆ ದೊಡ್ಡ ಗಲಭೆಯನ್ನೇ ಸೃಷ್ಟಿಸಿತ್ತು’ ಎನ್ನುತ್ತಾರೆ ಸಂಜೀಬ್.

ADVERTISEMENT

‘ಅಸ್ಸಾಂನಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ದೇಶದ ಹೊರಗಿನಿಂದ ಬಂದ ವಲಸಿಗರ ವಿಷಯವನ್ನು ಕಾಂಗ್ರೆಸ್ ಬಳಸಿಕೊಂಡಿದೆ. ಬಿಜೆಪಿಯೇನೂ ಭಿನ್ನವಾಗಿ ಇರಲಿಲ್ಲ. ಚುನಾವಣೆ ಬಳಿಕ ಎಲ್ಲ ಅಕ್ರಮ ವಲಸಿಗರನ್ನು ದೇಶ ಬಿಡಿಸುವುದಾಗಿ 2014ರ ಲೋಕಸಭಾ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಭಾಷೆ ನೀಡಿದ್ದರು. ತಮ್ಮ ಮಾತನ್ನು ಸಂಪೂರ್ಣ ಮರೆತ ಅವರು, ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದರು. ಅಸ್ಸಾಂ ಒಪ್ಪಂದದ ಪ್ರಕಾರ, 1971ರಮಾರ್ಚ್‌24ರ ಮೊದಲು ದೇಶಕ್ಕೆ ಬಂದವರಿಗಷ್ಟೇ ಪೌರತ್ವ ನೀಡಬೇಕು. ಆದರೆ, 2014ರ ಡಿಸೆಂಬರ್‌ನೊಳಗೆ ದೇಶಕ್ಕೆ ಬಂದ ಹಿಂದೂ ವಲಸಿಗರಿಗೂ ಪೌರತ್ವ ನೀಡಲು ಬಿಜೆಪಿ ಬಯಸಿದೆ. ಇದು ಮೋಸ ಅಲ್ಲವೇ? ಅಸ್ಸಾಂ ಗಣಪರಿಷತ್ ಪಕ್ಷ ಮಾತ್ರ ನಮಗಿರುವ ಪರ್ಯಾಯ ಎಂದುಕೊಂಡಿದ್ದೆವು. ಆದರೆ ಆ ಪಕ್ಷವೂ ಬಿಜೆಪಿ ಜೊತೆ ಕೈಜೋಡಿಸಿತು’ ಎಂದು ಅವರು ಹೇಳಿದ್ದಾರೆ.

ಕೆಲವೆಡೆ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ಮತ್ತು ಕೆಲವೆಡೆ ಪ್ರಾದೇಶಿಕ ಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳ ಭಾಗವಾಗಿರುವ ಬಿಜೆಪಿ, ಈಶಾನ್ಯದ ಏಳು ರಾಜ್ಯಗಳ 24 ಕ್ಷೇತ್ರಗಳ ಪೈಕಿ 20ರಲ್ಲಿ ಗೆಲುವು ಕಾಣುವ ವಿಶ್ವಾಸದಲ್ಲಿದೆ. ಅಸ್ಸಾಂನ 14ರ ಪೈಕಿ 11 ಕ್ಷೇತ್ರಗಳೂ ಇದರಲ್ಲಿ ಸೇರಿವೆ. ಕಾಂಗ್ರೆಸ್ ಅಸ್ಸಾಂನಲ್ಲಿ 10 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಇತರ ಕಡೆಯೂ ಉತ್ತಮ ಪ್ರದರ್ಶನದ ಭರವಸೆಯಲ್ಲಿದೆ.

ಅಚ್ಚರಿಯ ವಿದ್ಯಮಾನವೆಂದರೆ, ಬಿಜೆಪಿ ಹುಟ್ಟುಹಾಕಿರುವ ‘ಈಶಾನ್ಯ ರಾಜ್ಯಗಳ ಪ್ರಜಾಪ್ರಭುತ್ವ ಮೈತ್ರಿಕೂಟ’ದ (ಎನ್‌ಇಡಿಎ) ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ಐಪಿಎಫ್‌ಟಿ (ತ್ರಿಪುರಾ) ಪಕ್ಷಗಳು ತಮ್ಮ ಸ್ವಂತ ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕಿಳಿಸಿವೆ. ಬಿಜೆಪಿ ಒತ್ತಾಸೆಯ ಮೈತ್ರಿಕೂಟವು ಈಶಾನ್ಯದಲ್ಲಿ ವೈಫಲ್ಯ ಕಂಡಿರುವುದಕ್ಕೆ ಇದು ನಿದರ್ಶನ ಎಂದು ಮಾನವಹಕ್ಕು ಕಾರ್ಯಕರ್ತರಾದ ಸುಹಾಸ್ ಚಕ್ಮಾಹೇಳುತ್ತಾರೆ.

ಅಸ್ಸಾಂ

ಇಲ್ಲಿ ಹೋರಾಟ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟದ ನಡುವೆ. ಬಿಜೆಪಿ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಅದರ ಮೈತ್ರಿಪಕ್ಷಗಳಾದ ಎಜಿಪಿ ಮೂರರಲ್ಲಿ,ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಒಂದು ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದೆ. ಕಾಂಗ್ರೆಸ್ ಎಲ್ಲಾ 14 ಕಡೆ ಅಭ್ಯರ್ಥಿಗಳನ್ನು ಘೋಷಿಸಿದೆ. ಮೌಲಾನಾ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮೂರು ಅಭ್ಯರ್ಥಿಗಳನ್ನು ಹೆಸರಿಸಿದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ವಿರೋಧಿ ಶಕ್ತಿಗಳಿಗೆ ಸಹಾಯ ಮಾಡಲು ಅದು ನಿರ್ಧರಿಸಿದೆ. ಎನ್‌ಇಡಿಎ ಮೈತ್ರಿಕೂಟ 8 ಕಡೆ ಹೋರಾಟ ನಡೆಸಲಿದೆ.

ಮಣಿಪುರ

ಇಲ್ಲಿನ ಎರಡು ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ಕಣ್ಣಿಟ್ಟಿವೆ. ಏಪ್ರಿಲ್ 11 ಹಾಗೂ 18ರಂದು ಎರಡು ಹಂತದ ಮತದಾನ ನಡೆಯಲಿದೆ.

ಮೇಘಾಲಯ

ಎರಡು ಲೋಕಸಭಾ ಸ್ಥಾನಗಳಿಗಾಗಿ ಎನ್‌ಇಡಿಎ ಮಿತ್ರಪಕ್ಷ ಎನ್‌ಪಿಪಿ ಹಾಗೂ ಕಾಂಗ್ರೆಸ್ ನಡುವೆ ಇಲ್ಲಿ ಸ್ಪರ್ಧೆ ಇದೆ. ಎನ್‌ಪಿಪಿಯ ಪ್ರಬಲ ಕ್ಷೇತ್ರ ತುರಾದಲ್ಲಿಬಿಜೆಪಿ ಅಭ್ಯರ್ಥಿಯನ್ನು ಹಾಕಿದೆ. ಕಾಂಗ್ರೆಸ್ ಮುಖಂಡ ಮುಕುಲ್ ಸಂಗ್ಮಾ ವಿರುದ್ಧ ಹಾಲಿ ಸಂಸದೆ ಅಗಾಥ ಸಂಗ್ಮಾ ಅವರು ಪೈಪೋಟಿ ಒಡ್ಡಲು ಸಜ್ಜಾಗಿದ್ದಾರೆ.

ಅರುಣಾಚಲ ಪ್ರದೇಶ

ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿಯಿದೆ. ಏಪ್ರಿಲ್ 11ರಂದು ನಡೆಯುವ 60 ಸದಸ್ಯಬಲದ ಅರುಣಾಚಲ ವಿಧಾನಸಭೆ ಚುನಾವಣೆಯಲ್ಲಿ ಎನ್‌ಪಿಪಿ ಸ್ಪರ್ಧಿಸುವ ಸಾಧ್ಯತೆಯಿದೆ.

ನಾಗಾಲ್ಯಾಂಡ್

ಏಕೈಕ ಕ್ಷೇತ್ರ ಗೆಲ್ಲಲು ವಿರೋಧಪಕ್ಷ ಎನ್‌ಪಿಎಫ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ಹಾಗೂ ಆಡಳಿತಾರೂಢ ಪೀಪಲ್ಸ್ ಡೆಮಾಕ್ರಟಿಕ್ ಅಲಯನ್ಸ್ ಅಭ್ಯರ್ಥಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಮಿಜೋರಾಂ

ಆಡಳಿತರೂಢ ಎಂಎನ್ಎಫ್–ಎನ್‌ಪಿಪಿ ಸ್ಪರ್ಧಿಯನ್ನು ಕಾಂಗ್ರೆಸ್–ಝಡ್‌ಪಿಎಂ ಒಮ್ಮತದ ಅಭ್ಯರ್ಥಿ ವಿರುದ್ಧ ಕಣಕ್ಕಿಳಿಸಲಾಗಿದೆ. ಏಕೈಕ ಕ್ಷೇತ್ರದಲ್ಲಿ ಬಿಜೆಪಿಯೂ ತನ್ನ ಹುರಿಯಾಳುವಿನ ಹೆಸರು ಘೋಷಿಸಿದೆ.

ತ್ರಿಪುರಾ

ಹಲವು ವರ್ಷಗಳಿಂದ ರಾಜ್ಯದ ಮೇಲೆ ಎಡಪಕ್ಷಗಳ ಹಿಡಿತ ಇತ್ತು. ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರವಿದೆ. ಲೋಕಸಭೆಯ ಎರಡೂ ಕ್ಷೇತ್ರಗಳನ್ನು ವಶಕ್ಕೆ ಪಡೆಯಲು ಬಿಜೆಪಿ ಯತ್ನಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.