ADVERTISEMENT

ಯುಎಪಿಎ: ಪಿಎಫ್‌ಐ ಕಾರ್ಯಕರ್ತರಿಗೆ ಜಾಮೀನು ರದ್ದುಗೊಳಿಸಿದ ಸುಪ್ರೀಂ

8 ಆರೋಪಿಗಳು ತಕ್ಷಣ ಶರಣಾಗಿ, ಜೈಲಿಗೆ ಹೋಗಬೇಕು * ರಾಷ್ಟ್ರೀಯ ಭದ್ರತೆಗೆ ಅತ್ಯುನ್ನತ ಪ್ರಾಮುಖ್ಯ

ಪಿಟಿಐ
Published 22 ಮೇ 2024, 14:19 IST
Last Updated 22 ಮೇ 2024, 14:19 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ದಾಖಲಾಗಿರುವ ಪ್ರಕರಣದಲ್ಲಿ ಪಿಎಫ್‌ಐ ಕಾರ್ಯಕರ್ತರಿಗೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಜಾಮೀನು ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಗೊಳಿಸಿದೆ.

ಎಂಟು ಆರೋಪಿಗಳಿಗೆ ಜಾಮೀನು ನೀಡಿ ಕಳೆದ ವರ್ಷದ ಅಕ್ಟೋಬರ್‌ 19ರಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಅದನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ, ಪಂಕಜ್‌ ಮಿಥಾಲ್‌ ಅವರ ಪೀಠ ರದ್ದುಗೊಳಿಸಿತು. ಆರೋಪಿಗಳು ತಕ್ಷಣ ಶರಣಾಗಬೇಕು ಮತ್ತು ಜೈಲಿಗೆ ಹೋಗಬೇಕು ಎಂದು ಪೀಠ ಸೂಚಿಸಿತು.

ರಾಷ್ಟ್ರೀಯ ಭದ್ರತೆ ಮುಖ್ಯ: ‘ರಾಷ್ಟ್ರೀಯ ಭದ್ರತೆಯು ಅತ್ಯುನ್ನತ ಪ್ರಾಮುಖ್ಯತೆ ನೀಡುವ ವಿಚಾರವಾಗಿದೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಯಾವುದೇ ಕೃತ್ಯಗಳನ್ನು ನಿರ್ಬಂಧಿಸಬೇಕಾಗುತ್ತದೆ’ ಎಂದು ಅದು ಈ ಸಂದರ್ಭದಲ್ಲಿ ಹೇಳಿದೆ. 

ADVERTISEMENT

ಈ ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದ ತೀರ್ಪನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಆರೋಪಿಗಳಾದ ಬರಕತ್‌ ಉಲ್ಲಾ, ಇದ್ರಿಸ್‌, ಮೊಹಮ್ಮದ್‌ ಅಬುತಾಹಿರ್‌, ಖಾಲಿದ್‌ ಮೊಹಮ್ಮದ್‌, ಸೈಯದ್‌ ಇಶಾಕ್‌, ಖಾಜಾ ಮೊಹೈದೀನ್‌, ಯಾಸರ್‌ ಅರಾಫತ್‌ ಮತ್ತು ಫಯಾಜ್‌ ಅಹ್ಮದ್‌ ಅವರನ್ನು 2022ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.

‘ಪಿಎಫ್‌ಐ ಮೂಲಭೂತವಾಗಿ ಇಸ್ಲಾಮಿಕ್‌ ಸಂಘಟನೆಯಾಗಿದೆ. ಇದು ಷರಿಯಾ ಕಾನೂನಿನ ಮೂಲಕ ಭಾರತದಲ್ಲಿ ಮುಸ್ಲಿಂ ಆಡಳಿತ ಸ್ಥಾಪಿಸುವ ಅಪಾಯಕಾರಿ ಗುರಿ ಹೊಂದಿದೆ’ ಎಂದು ಎನ್‌ಐಎ ಅರ್ಜಿಯಲ್ಲಿ ಪ್ರತಿಪಾದಿಸಿದೆ.

‘ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಸಿದುಕೊಳ್ಳುವ ನಿಟ್ಟಿನಲ್ಲಿ ಶಸ್ತ್ರಸಜ್ಜಿತ ಸೇನಾಪಡೆ ಕಟ್ಟುವ ನಿಟ್ಟಿನಲ್ಲಿ ಆರೋಪಿಗಳು ಕೃತ್ಯಗಳನ್ನು ಎಸಗಿದ್ದಾರೆ’ ಎಂದು ಎನ್‌ಐಎ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.