ನವದೆಹಲಿ (ಪಿಟಿಐ): ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ (ಮಸರತ್ ಆಲಂ ಬಣ) ಹಾಗೂ ಜಮ್ಮು ಮತ್ತು ಕಾಶ್ಮೀರದ ತೆಹರೀಕ್–ಎ–ಹುರಿಯತ್ ಸಂಘಟನೆಗಳ ಮೇಲೆ ಐದು ವರ್ಷಗಳ ಅವಧಿಗೆ ನಿಷೇಧ ಹೇರಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿ ಸ್ಥಾಪಿಸಲಾಗಿರುವ ನ್ಯಾಯಮಂಡಳಿಯು ಶನಿವಾರ ಎತ್ತಿಹಿಡಿದಿದೆ.
ನಿಷೇಧ ಹೇರುವುದಕ್ಕೆ ಬಲವಾದ ಕಾರಣಗಳು ಇವೆಯೇ ಎಂಬುದನ್ನು ಪರಿಶೀಲಿಸಲು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಚಿನ್ ದತ್ತ ಅವರು ಇದ್ದ ಏಕಸದಸ್ಯ ನ್ಯಾಯಮಂಡಳಿಯನ್ನು ಯುಎಪಿಎ ಅಡಿಯಲ್ಲಿ ಜನವರಿಯಲ್ಲಿ ರಚಿಸಲಾಗಿತ್ತು.
ಈ ಎರಡು ಸಂಘಟನೆಗಳು ಗಡಿಯಾಚೆಯಿಂದ ಬೆಂಬಲ ಪಡೆದು, ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಜೊತೆ ವಿಲೀನಗೊಳಿಸಲು ಹಾಗೂ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಕಣಿವೆಯಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದವು ಎಂದು ನ್ಯಾಯಮಂಡಳಿಯು ಹೇಳಿದೆ.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ ತಯ್ಯಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಪರವಾಗಿ ಈ ಎರಡು ಸಂಘಟನೆಗಳು ಕೆಲಸ ಮಾಡುತ್ತಿದ್ದವು, ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸಲು ನಿರಂತರವಾಗಿ ಬೆಂಬಲ ಒದಗಿಸುತ್ತಿದ್ದವು ಎಂದು ಕೇಂದ್ರ ಸರ್ಕಾರ ಹೇಳಿದ್ದನ್ನು ನ್ಯಾಯಮಂಡಳಿಯು ಒಪ್ಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.