ನವದೆಹಲಿ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಹೊಸದಾಗಿ ಆಯ್ಕೆಯಾಗಿರುವ ಇಬ್ಬರು ಲೋಕಸಭಾ ಸದಸ್ಯರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶನಿವಾರ ಶಿಂಧೆ ನೇತೃತ್ವದ ಶಿವಸೇನೆ ಶನಿವಾರ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಶಿಂಧೆ ನೇತೃತ್ವದ ಶಿವಸೇನೆಯ ವಕ್ತಾರ ನರೇಶ್ ಮಸ್ಕೆ ಈ ವಿಚಾರ ಹಂಚಿಕೊಂಡರು. ಪಕ್ಷಾಂತರ ವಿರೋಧಿ ಕಾನೂನಿನ ಹಿನ್ನೆಲೆಯಲ್ಲಿ ಆ ಇಬ್ಬರು ಲೋಕಸಭಾ ಸದಸ್ಯರ ಹೆಸರನ್ನು ಹೇಳಲು ನಿರಾಕರಿಸಿದರು. ಇವರೊಂದಿಗೆ ಇನ್ನೂ ನಾಲ್ವರು ಮುಖ್ಯಮಂತ್ರಿ ಅವರ ಸಂಪರ್ಕದಲ್ಲಿದ್ದಾರೆ. ಅವರು ಶೀಘ್ರದಲ್ಲೇ ನಮ್ಮ ಪಕ್ಷ ಸೇರಿಕೊಳ್ಳುತ್ತಾರೆ ಎಂದು ಮಸ್ಕೆ ಹೇಳಿದರು.
ಈ ಸಂಸದರು ಉದ್ಧವ್ ಠಾಕ್ರೆ ಅವರ ನಾಯಕತ್ವದಲ್ಲಿ ಅಸಮಾಧಾನ ಹೊಂದಿದ್ದಾರೆ ಎಂದು ಥಾಣೆ ಸಂಸದರಾಗಿರುವ ನರೇಶ್ ಮಸ್ಕೆ ತಿಳಿಸಿದರು.
ಶಿಂಧೆ ಬಣದ ಶಾಸಕರು ಮತ್ತು ಸಂಸದರು ಠಾಕ್ರೆ ಅವರ ಬಣ ಸೇರಲು ಉತ್ಸುಕರಾಗಿದ್ದಾರೆ ಎಂದು ಸಂಜಯ್ ರಾವತ್ ಅವರ ಹೇಳಿಕೆಯ ಬೆನ್ನಲ್ಲೆ ಮಸ್ಕೆ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಹೇಳಿಕೆ ನೀಡಿದ್ದಾರೆ.
ಶಿಂಧೆ ನೇತೃತ್ವದ ಶಿವಸೇನೆ ಏಳು ಲೋಕಸಭಾ ಸ್ಥಾನಗಳನ್ನು ಗೆದ್ದರೆ, ಠಾಕ್ರೆ ಬಣವು ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.