ನವದೆಹಲಿ: ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಸಂಬಂಧಪಟ್ಟವರೆಲ್ಲರ ಜೊತೆ ಸಮಾಲೋಚನೆ ನಡೆಸಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಿಟಿಐ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮೋದಿ ಸರ್ಕಾರವು ಮುಂದಿನ ಅವಧಿಯಲ್ಲಿ ‘ಒಂದು ದೇಶ ಒಂದು ಚುನಾವಣೆ’ ಸಹ ಜಾರಿಗೆ ತರಲಿದೆ. ದೇಶದೆಲ್ಲೆಡೆ ಏಕಕಾಲಕ್ಕೆ ಚುನಾವಣೆ ನಡೆಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.
ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯುವುದರಿಂದ ವೆಚ್ಚವೂ ತಗ್ಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಸದ್ಯ ಬಿರುಬಿಸಿಲಿನ ಸಮಯದಲ್ಲಿ ಚುನಾವಣೆ ನಡೆಯುತ್ತಿದ್ದು, ಚಳಿಗಾಲ ಅಥವಾ ಬೇರೆ ಸಮಯದಲ್ಲಿ ಚುನಾವಣೆ ನಡೆಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಅದರ ಬಗ್ಗೆ ಯೋಚಿಸಬೇಕಿದೆ ಎಂದಿದ್ದಾರೆ.
‘ಯುಸಿಸಿ ಜಾರಿಯ ಹೊಣೆ ನಮ್ಮ ಮೇಲಿದೆ. ಸ್ವಾತಂತ್ರ್ಯ ಬಂದು ಸಂವಿಧಾನ ರಚನೆಯಾದಾಗಿನಿಂದಲೂ ಬಾಕಿ ಇದೆ’ಎಂದಿದ್ದಾರೆ.
‘ಸಂವಿಧಾನದಲ್ಲಿ ಯುಸಿಸಿ ಸೇರ್ಪಡೆಗೆ ಸಂವಿಧಾನ ರಚನಾ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜಾತ್ಯತೀತ ದೇಶದಲ್ಲಿ ಧರ್ಮಗಳ ಆಧಾರದ ಮೇಲೆ ಕಾನೂನು ಇರಬಾರದು. ಏಕರೂಪ ನಾಗರಿಕ ಸಂಹಿತೆ ಬೇಕು ಎಂದು ಕಾನೂನು ತಜ್ಞರಾದ ಕೆ.ಡಂ. ಮುನ್ಷಿ, ರಾಜೇಂದ್ರ ಬಾಬು, ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು’ ಎಂದು ಶಾ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಈ ಕುರಿತ ಪ್ರಯೋಗ ಮಾಡಲಾಗಿದೆ ಎಂದಿದ್ದಾರೆ.
‘ಯುಸಿಸಿಯು ಬಹುದೊಡ್ಡ ಸಾಮಾಜಿಕ, ಕಾನೂನಾತ್ಮಕ ಮತ್ತು ಧಾರ್ಮಿಕ ಸುಧಾರಣೆಯಾಗಿದೆ. ಕಾನೂನು ಜಾರಿ ಮಾಡಿದ ಉತ್ತರಾಖಂಡ ಸರ್ಕಾರ ಸಾಮಾಜಿಕ ಮತ್ತು ಕಾನೂನಾತ್ಮಕ ಪರಿಶೀಲನೆ ನಡೆಸಬೇಕಿದೆ. ಧಾರ್ಮಿಕ ನಾಯಕರ ಜೊತೆಯೂ ಸಮಾಲೋಚನೆ ನಡೆಸಬೇಲಿದೆ. ನನ್ನ ಮಾತಿಗೆ ಅರ್ಥವೇನೆಂದರೆ, ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿದೆ. ಆ ಬಳಿಕ, ಸರ್ಕಾರ ತಿದ್ದುಪಡಿ ಮಾಡಬಹುದು. ಏಕೆಂದರೆ, ಯಾರಾದರೂ ನ್ಯಾಯಾಲಯಕ್ಕೆ ಹೋಗಿಯೇ ಹೋಗುತ್ತಾರೆ. ನ್ಯಾಯಾಂಗದ ಅಭಿಪ್ರಾಯವೂ ಬರಲಿದೆ’ ಎಂದಿದ್ದಾರೆ.
‘ಇದೆಲ್ಲದರ ಬಳಿಕ ರಾಜ್ಯಗಳ ವಿಧಾನಸಭೆಗಳು ಮತ್ತು ದೇಶದ ಸಂಸತ್ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಮತ್ತು ಯುಸಿಸಿ ಕಾಯ್ದೆ ಜಾರಿಗೆ ತರಬೇಕಿದೆ. ಹಾಗಾಗಿಯೇ ನಮ್ಮ ಸಂಕಲ್ಪ ಪತ್ರದಲ್ಲಿ ದೇಶದಾದ್ಯಂತ ಯುಸಿಸಿ ಜಾರಿ ಮಾಡುವ ಗುರಿ ಹೊಂದಲಾಗಿದೆ’ಎಂದು ಉಲ್ಲೇಖಿಸಿರುವುದಾಗಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.