ADVERTISEMENT

ಉದಯನಿಧಿ ‘ಸನಾತನ ಧರ್ಮ’ ಹೇಳಿಕೆಗೆ ಕಾಂಗ್ರೆಸ್‌ನಲ್ಲಿ ಪರ–ವಿರೋಧ ಅಭಿಪ್ರಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಸೆಪ್ಟೆಂಬರ್ 2023, 13:09 IST
Last Updated 4 ಸೆಪ್ಟೆಂಬರ್ 2023, 13:09 IST
<div class="paragraphs"><p>ಉದಯನಿಧಿ ಸ್ಟಾಲಿನ್‌</p></div>

ಉದಯನಿಧಿ ಸ್ಟಾಲಿನ್‌

   

ನವದೆಹಲಿ: ‘ಸನಾತನ ಧರ್ಮ ಡೆಂಗಿ ಇದ್ದಂತೆ, ಇದನ್ನು ನಿರ್ಮೂಲನೆ ಮಾಡಬೇಕು’ ಎಂಬ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ಹೇಳಿಕೆ ಕುರಿತಂತೆ ಮಿತ್ರಪಕ್ಷ ಕಾಂಗ್ರೆಸ್‌ ಇಕ್ಕಟ್ಟಿಗೆ ಸಿಲುಕಿದೆ. ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಹೇಳಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್, ‘ಪ್ರತಿ ರಾಜಕೀಯ ಪಕ್ಷವು ತನ್ನ ನಿಲುವು, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಹೊಂದಿದೆ. ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಅಂತಯೇ ಕಾಂಗ್ರೆಸ್‌ ಎಲ್ಲರ ನಂಬಿಕೆಗಳನ್ನು ಗೌರವಿಸುತ್ತದೆ. ಸರ್ವ ಧರ್ಮ ಸಮಭಾವ ಎಂಬುದು ಕಾಂಗ್ರೆಸ್‌ ಸಿದ್ದಾಂತವಾಗಿದೆ’ ಎಂದು ಹೇಳಿದರು.

ADVERTISEMENT

ಉದಯನಿಧಿ ಅವರ ಹೇಳಿಕೆ ವಿಚಾರವಾಗಿ ಸುದ್ದಿಸಂಸ್ಥೆ ಎಎನ್ಐಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ, ಉದಯನಿಧಿ ಹೇಳಿಕೆಯನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ‘ಸಮಾನತೆಯನ್ನು ಉತ್ತೇಜಿಸದ, ಮನುಷ್ಯರೆಲ್ಲರಿಗೂ ಘನತೆಯಿಂದ ಬಾಳಲು ಬಿಡದ ಯಾವುದೇ ಧರ್ಮವು ನನ್ನ ಪ್ರಕಾರ ಧರ್ಮವಲ್ಲ. ಸಮಾನ ಹಕ್ಕುಗಳನ್ನು ನೀಡದ, ಮನುಷ್ಯನೆಂದು ಪರಿಗಣಿಸದ ಯಾವುದೇ ಧರ್ಮವು ರೋಗಕ್ಕೆ ಸಮಾನವಾಗಿದೆ’ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯ‍ಪ್ರದೇಶದ ಕಾಂಗ್ರೆಸ್‌ನ ಹಿರಿಯ ಮುಖಂಡ ಕಮಲನಾಥ್‌, ‘ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅವರ ಮಾತಿಗೆ ನನ್ನ ಸಮ್ಮತಿಯಿಲ್ಲ’ ಎಂದು ಹೇಳಿದ್ದಾರೆ.

ಸನಾತನ ಧರ್ಮ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಕರಣ್ ಸಿಂಗ್, ಇದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ. 'ಸನಾತನ ಧರ್ಮ ಹಲವಾರು ದೇವಾಲಯಗಳು ತಮಿಳುನಾಡಿನಲ್ಲಿಯೇ ಇದೆ. ಉದಯನಿಧಿ ಅವರ ಹೇಳಿಕೆ ಒಪ್ಪುವಂತದಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗರೆ ಮಾತನಾಡಿದ ಸಚಿವ ಎಚ್.ಸಿ ಮಹದೇವಪ್ಪ, ಉದಯನಿಧಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಸನಾತನ ಧರ್ಮದಲ್ಲಿ ಶೂದ್ರರಿಗೆ ವಿದ್ಯೆ ಕಲಿಸಿರಲಿಲ್ಲ. ಲಾರ್ಡ್‌ ಮೆಕಾಲೆ ಬಂದ ಮೇಲೆ ಶೂದ್ರರು ಶಿಕ್ಷಣ ಪಡೆಯುವಂತಾಯಿತು. ಉದಯನಿಧಿ ಅವರ ಹೇಳಿಕೆ ಸರಿಯಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.