ADVERTISEMENT

ಚುನಾವಣಾ ಸೋಲು: ನಿವೃತ್ತ ಸಿಜೆಐ ಚಂದ್ರಚೂಡ್‌ ವಿರುದ್ಧ ಉದ್ಧವ್‌, ರಾವುತ್‌ ಟೀಕೆ

ಪಿಟಿಐ
Published 24 ನವೆಂಬರ್ 2024, 13:58 IST
Last Updated 24 ನವೆಂಬರ್ 2024, 13:58 IST
ಉದ್ಧವ್ ಠಾಕ್ರೆ 
ಉದ್ಧವ್ ಠಾಕ್ರೆ    

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನಾ(ಯುಬಿಟಿ) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಪಕ್ಷದ ನಾಯಕರಾದ ಉದ್ಧವ್‌ ಠಾಕ್ರೆ ಹಾಗೂ ಸಂಜಯ್ ರಾವುತ್‌ ಅವರು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ವಿರುದ್ಧ ಟೀಕೆ ಮಾಡಿದ್ಧಾರೆ.

ಶನಿವಾರ, ಫಲಿತಾಂಶ ವಿಶ್ಲೇಷಿಸಿದ್ದ ಉದ್ಧವ್‌ ಠಾಕ್ರೆ, ಶಿವಸೇನಾ ಪಕ್ಷ ಇಬ್ಭಾಗವಾದ ಕುರಿತು ನ್ಯಾಯಮೂರ್ತಿ ಚಂದ್ರಚೂಡ್‌ ಅವರು ತೀರ್ಪು ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

‘ಈ ವಿಚಾರದಲ್ಲಿ ಗೊಂದಲವಿದೆ. ಶಿವಸೇನಾ ಹಾಗೂ ಎನ್‌ಸಿಪಿ ಬಣಗಳ ಹೆಸರು, ಚಿಹ್ನೆ ವಿಚಾರವಾಗಿ ಎರಡು ವರ್ಷ ಕಳೆದರೂ ಸುಪ್ರೀಂ ಕೋರ್ಟ್‌ ತೀರ್ಪು ನೀಡಿಲ್ಲ. ಹೀಗಿದ್ದರೂ ಚುನಾವಣೆಗಳು ನಡೆದಿವೆ. ಹಾಗಾಗಿ, ಯಾರನ್ನು ನಾವು ನಂಬಬೇಕು? ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು’ ಎಂದು ಉದ್ಧವ್‌ ಹೇಳಿದ್ದರು..

ADVERTISEMENT

ಇದೇ ವಿಚಾರವಾಗಿ, ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಕೂಡ ನಿವೃತ್ತ ಸಿಜೆಐ ಚಂದ್ರಚೂಡ್‌ ವಿರುದ್ಧ ಭಾನುವಾರ ಟೀಕಾಪ್ರಹಾರ ನಡೆಸಿದರು.

‘ಪಕ್ಷಾಂತರ ಮಾಡುವವರಲ್ಲಿ ಕಾನೂನು ಬಗ್ಗೆ ಇದ್ದ ಹೆದರಿಕೆಯನ್ನು ಚಂದ್ರಚೂಡ್‌ ದೂರ ಮಾಡಿದ್ದಾರೆ. ಚರಿತ್ರೆಯಲ್ಲಿ ಅವರ ಹೆಸರನ್ನು ಕಪ್ಪು ಅಕ್ಷರಗಳಲ್ಲಿ ಬರೆಯಲಾಗುತ್ತದೆ’ ಎಂದು ರಾವುತ್‌ ಟೀಕಿಸಿದರು.

‘ಪಕ್ಷಾಂತರ ಮಾಡಿದ ಶಾಸಕರ ಅನರ್ಹತೆ ಕುರಿತ ಅರ್ಜಿಗಳಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳದಿರುವ ಮೂಲಕ ಚಂದ್ರಚೂಡ್‌ ಅವರು ಪಕ್ಷಾಂತರಕ್ಕೆ ಮುಕ್ತ ಅವಕಾಶ ಕೊಟ್ಟಿದ್ದಾರೆ’ ಎಂದು ಹೇಳಿದರು.

ದಸರಾ ಪ್ರಯುಕ್ತ ಹಮ್ಮಿಕೊಳ್ಳುವ ರ‍್ಯಾಲಿ ಹಾಗೂ ಇತ್ತೀಚಿನ ಚುನಾವಣಾ ರ‍್ಯಾಲಿಗಳಲ್ಲಿ ಕೂಡ ಉದ್ಧವ್‌ ಈ ವಿಚಾರವಾಗಿ ಮಾತನಾಡಿದ್ದರು.

‘ಇತಿಹಾಸದಲ್ಲಿ ನಿಮ್ಮ ಹೆಸರು ಉಳಿಯಬೇಕು ಎಂದು ನೀವು ನಿಜವಾಗಿಯೂ ಬಯಸಿದ್ದಲ್ಲಿ, ಈಗ ನಿಮ್ಮ ಮುಂದೆ ಅವಕಾಶ ಇದೆ. ನಿವೃತ್ತರಾಗುವ ಮೊದಲೇ ಆ ಕೆಲಸ ಮಾಡಿ, ಪ್ರಜಾಪ್ರಭುತ್ವ ಉಳಿಸಿ’ ಎಂದು ಠಾಕ್ರೆ ಹೇಳಿದ್ದರು.

‘ಇಡೀ ದೇಶವೇ ನಿಮ್ಮತ್ತ ನೋಡುತ್ತಿದೆ. ದೇಶ ನಿಮ್ಮ ಬಗ್ಗೆ ಅಭಿಮಾನಪಡುವಂತಹ ತೀರ್ಪು ಪ್ರಕಟಿಸಿ’ ಎಂದು ಹೇಳಿದ್ದರು.

ಸಂಜಯ್‌ ರಾವುತ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.