ಮುಂಬೈ: ಶಿವಸೇನಾದ (ಉದ್ಧವ್ ಬಣದ) ಮುಖಂಡ ಅಭಿಷೇಕ್ ಘೋಸಾಲಕರ್ ಅವರು ಗುರುವಾರ ಸಂಜೆ ಫೇಸ್‌ಬುಕ್ ಲೈವ್ ನಡೆಸುತ್ತಿದ್ದಾಗಲೇ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಆರೋಪಿ, ಸಾಮಾಜಿಕ ಕಾರ್ಯಕರ್ತ ಮಾರಿಸ್ ನೊರೊನ್ಹಾ ಸಹ ಅದೇ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನೊರೊನ್ಹಾ ಅವರ ಅಂಗರಕ್ಷಕ ಅಮರೇಂದ್ರ ಮಿಶ್ರಾನನ್ನು ಬಂಧಿಸಿರುವ ಮುಂಬೈ ಪೊಲೀಸ್‌ನ ಅಪರಾಧ ವಿಭಾಗವು, ಆತನನ್ನು ವಿಚಾರಣೆಗೊಳಪಡಿಸಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಪಾಲಿಕೆಯ ಮಾಜಿ ಕಾರ್ಪೊರೇಟರ್ ಆಗಿದ್ದ ಅಭಿಷೇಕ್, ಮಾಜಿ ಶಾಸಕ ವಿನೋದ್ ಘೋಸಾಲಕರ್ ಅವರ ಪುತ್ರ.
ನೊರೊನ್ಹಾ ಪತ್ನಿ ಹಾಗೂ ಕುಟುಂಬದವರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ನೊರೊನ್ಹಾ, ಐದು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಈತನ ವಿರುದ್ಧ ಹಲವು ಪ್ರಕರಣಗಳಿವೆ.
ರಾಜಕೀಯ ಆಕಾಂಕ್ಷೆಗಳನ್ನು ಹೊಂದಿದ್ದ ಇಬ್ಬರ ನಡುವೆ ಪೈಪೋಟಿಯಿತ್ತು. ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ನೊರೊನ್ಹಾ, ಘೋಸಾಲಕರ್ ವಿರುದ್ಧ ಕೆಂಡಕಾರುತ್ತಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಸ್ನೇಹ ಬೆಳೆಸಿ, ಅಭಿಷೇಕ್ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದ.
ಗುರುವಾರ ಸಂಜೆ 7.30ರ ವೇಳೆಗೆ ಘೋಸಾಲಕರ್‌ಗೆ ಕರೆ ಮಾಡಿದ ನೊರೊನ್ಹಾ, ‘ನನ್ನ ಕಚೇರಿಯಲ್ಲಿ ಮಹಿಳೆಯರಿಗೆ ಸೀರೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವೆ ಬನ್ನಿ’ ಎಂದು ಆಹ್ವಾನ ನೀಡಿದ್ದ. ಕಚೇರಿಗೆ ಬಂದ ಘೋಸಾಲಕರ್‌ಗೆ ಫೇಸ್‌ಬುಕ್ ಲೈವ್ ನಡೆಸುವಂತೆ ಕೋರಿದ. ಅದರಂತೆ ಅಭಿಷೇಕ್ ಲೈವ್ ನಡೆಸುವಾಗ ತನ್ನ ಅಂಗರಕ್ಷಕನ ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಂತರ ತಾನೂ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ 2 ತಂಡ: ಪ್ರಕರಣದ ತನಿಖೆ ನಡೆಸಲು ಮುಂಬೈ ಪೊಲೀಸ್‌ನ ಅಪರಾಧ ವಿಭಾಗವು ಎರಡು ತಂಡಗಳನ್ನು ರಚಿಸಿದೆ. ಒಂದು ತಂಡ ಘೋಸಾಲಕರ್ ಹತ್ಯೆ ಕುರಿತು ತನಿಖೆ ನಡೆಸಿದರೆ, ಇನ್ನೊಂದು ತಂಡ ನೊರೊನ್ಹಾ ಆತ್ಮಹತ್ಯೆಯ ಬಗ್ಗೆ ತನಿಖೆ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.