ADVERTISEMENT

ಶಿವಸೇನಾ ಬಣಗಳ ಅನರ್ಹತೆ ಆದೇಶಕ್ಕೂ ಮುನ್ನ ಸ್ಪೀಕರ್–ಸಿಎಂ ಭೇಟಿ: ಠಾಕ್ರೆ ಆಕ್ರೋಶ

ಪಿಟಿಐ
Published 10 ಜನವರಿ 2024, 5:22 IST
Last Updated 10 ಜನವರಿ 2024, 5:22 IST
<div class="paragraphs"><p>ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ&nbsp;ಉದ್ಧವ್ ಠಾಕ್ರೆ</p></div>

ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಉದ್ಧವ್ ಠಾಕ್ರೆ

   

ಮುಂಬೈ: ಶಿವಸೇನಾ ಪಕ್ಷದಲ್ಲಿ ಒಡಕುಂಟಾದ ಬಳಿಕ ಉಭಯ ಬಣದ ಶಾಸಕರು ಪರಸ್ಪರ ಅನರ್ಹತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಇಂದು (ಬುಧವಾರ ಜ.10) ಆದೇಶ ಪ್ರಕಟಿಸಲಿದ್ದಾರೆ. ಇದರ ನಡುವೆ ರಾಜ್ಯದಲ್ಲಿ ರಾಜಕೀಯದ ಬಿಸಿ ಏರಿದೆ.

18 ತಿಂಗಳ ಹಿಂದೆ ಶಿವಸೇನೆ ವಿಭಜನೆಯಾದದ್ದು, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಆಘಾಡಿ (ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನಾ ಮೈತ್ರಿ) ಸರ್ಕಾರ ಪತನಗೊಂಡು, ಬಿಜೆಪಿ–ಶಿವಸೇನೆ ಮೈತ್ರಿ ಸರ್ಕಾರ ರಚನೆಗೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದ ಬಹುನಿರೀಕ್ಷಿತ ತೀರ್ಪನ್ನು ನಾರ್ವೇಕರ್‌ ಅವರು ಸಂಜೆ 4ಕ್ಕೆ ನೀಡಲಿದ್ದಾರೆ.

ADVERTISEMENT

ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರದ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಭವಿಷ್ಯವನ್ನು ಸ್ಪೀಕರ್ ತೀರ್ಪು ನಿರ್ಧರಿಸಲಿದೆ.

ಈ ನಡುವೆ ಸ್ಪೀಕರ್‌ ನಾರ್ವೇಕರ್‌ ಅವರು ಮುಖ್ಯಮಂತ್ರಿ ಶಿಂದೆ ಅವರನ್ನು ಭೇಟಿಯಾಗಿರುವುದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ನಾರ್ವೇಕರ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ಸೋಮವಾರ ಅಫಿಡವಿಟ್‌ ಸಲ್ಲಿಸಿದೆ.

ನಾರ್ವೇಕರ್‌ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ವರ್ಷಾ'ದಲ್ಲಿ ಶಿಂದೆ ಅವರನ್ನು ಭಾನುವಾರ ಭೇಟಿ ಮಾಡಿದ್ದರು.

ಸ್ಪೀಕರ್‌ ವಿರುದ್ಧ ಠಾಕ್ರೆ ಕಿಡಿ
ತಮ್ಮ ನಿವಾಸ ಮಾತೋಶ್ರಿಯಲ್ಲಿ ಮಾತನಾಡಿರುವ ಉದ್ಧವ್, 'ನ್ಯಾಯಾಧೀಶರು (ರಾಹುಲ್‌ ನಾರ್ವೇಕರ್‌) ಆರೋಪಿಯನ್ನು ಭೇಟಿ ಮಾಡುತ್ತಾರೆ ಎಂದರೆ, ಅವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ' ಎಂದು ಕೇಳಿದ್ದಾರೆ.

ಅನರ್ಹತೆ ಅರ್ಜಿಗಳ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ 2023ರ ಮೇ ತಿಂಗಳಲ್ಲಿ ನಾರ್ವೇಕರ್‌ಗೆ ನಿರ್ದೇಶನ ನೀಡಿತ್ತು. ಅದಾದ ಬಳಿಕ ಅವರು ಮುಖ್ಯಮಂತ್ರಿಯನ್ನು ಎರಡು ಬಾರಿ ಭೇಟಿಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾರ್ವೇಕರ್ ಅವರ ಆದೇಶವು ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆಯೇ ಅಥವಾ ಇಬ್ಬರೂ ಸೇರಿ (ಮುಖ್ಯಮಂತ್ರಿ ಮತ್ತು ಸ್ಪೀಕರ್‌) ಕೊಲೆ ಮಾಡಿದ್ದಾರೆಯೇ ಎಂಬುದನ್ನು ನಿರ್ಧರಿಸಲಿದೆ ಎಂದೂ ಹೇಳಿದ್ದಾರೆ.

ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ನಾಯಕ ಶರದ್‌ ಪವಾರ್‌ ಅವರು, ನಾರ್ವೇಕರ್ ಅವರ ನಡೆ ಸಾಕಷ್ಟು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ ಎಂದಿದ್ದಾರೆ.

ಸ್ಪೀಕರ್‌ ತಿರುಗೇಟು
ವಿರೋಧ ಪಕ್ಷಗಳ ನಾಯಕರ ಆರೋಪಗಳಿಗೆ ನಾರ್ವೇಕರ್‌ ಅವರು, ಸ್ಪೀಕರ್ ಅವರು ಯಾವ ಕಾರಣಕ್ಕೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

'ಅವರು ಈಗಲೂ ಇಂತಹ ಆರೋಪಗಳನ್ನು ಮಾಡುವುದನ್ನು ಮುಂದುವರಿಸಿದರೆ, ಅವರ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತದೆ. ಅನರ್ಹತೆ ಅರ್ಜಿಗಳ ವಿಚಾರಣೆ ನಡೆಸುವ ವೇಳೆ ಸ್ಪೀಕರ್‌ ಅವರು ಬೇರೆ ಕೆಲಸ ಮಾಡಬಾರದು ಎಂಬ ಯಾವುದೇ ನಿಯಮವಿಲ್ಲ' ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಾವಿಬ್ಬರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊನೆಯ ಸಲ ಭೇಟಿಯಾಗಿದ್ದೆವು ಎಂದೂ ಸ್ಪೀಕರ್‌ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಅವರು, ಶಿವಸೇನಾ–ಬಿಜೆಪಿ–ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಸರ್ಕಾರ ಸ್ಥಿರವಾಗಿ ಇರಲಿದೆ. ಮೈತ್ರಿಯು ಕಾನೂನಾತ್ಮಕವಾಗಿದ್ದು, ಆದೇಶವು ನಮ್ಮ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಸೂಚನೆ
ಶಿಂದೆ ಅವರು 2022ರ ಜೂನ್‌ನಲ್ಲಿ ಹಲವು ಶಾಸಕರೊಂದಿಗೆ ಸೇರಿ ಎಂವಿಎ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದರು. ಇದು ಪಕ್ಷ ವಿಭಜನೆಗೆ ಕಾರಣವಾಯಿತು. ಬಳಿಕ ಶಿಂದೆ, ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದರು.

ಇದರ ಬೆನ್ನಲ್ಲೇ, ಪಕ್ಷಾಂತರ ತಡೆ ಕಾನೂನಿನ ಅಡಿಯಲ್ಲಿ ಉಭಯ ಬಣಗಳು ಅನರ್ಹತೆ ಅರ್ಜಿ ಸಲ್ಲಿಸಿವೆ. ಈ ಸಂಬಂಧ ತ್ವರಿತವಾಗಿ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಕಳೆದ ಮೇ ತಿಂಗಳಲ್ಲಿ ನಾರ್ವೇಕರ್‌ಗೆ ಸೂಚಿಸಿತ್ತು.

ಬಳಿಕ 2023ರ ಡಿಸೆಂಬರ್ 31ರ ಒಳಗೆ ನಿರ್ಧಾರ ಕೈಗೊಳ್ಳುವಂತೆ ಅದೇ ವರ್ಷ ನವೆಂಬರ್‌ನಲ್ಲಿ ಸೂಚಿಸಿದ್ದ ಕೋರ್ಟ್‌, ಗಡುವನ್ನು ಜನವರಿ 10ಕ್ಕೆ ಮುಂದೂಡಿತ್ತು.

ಶಿಂದೆ ಬಣವೇ 'ಶಿವಸೇನಾ' ಎಂದ ಆಯೋಗ
ಶಿಂದೆ ಬಣವೇ ನಿಜವಾದ ಶಿವಸೇನಾ ಎಂದು 2023ರ ಫೆಬ್ರವರಿಯಲ್ಲಿ ಘೋಷಿಸಿದ್ದ ಚುನಾವಣಾ ಆಯೋಗ, 'ಶಿವಸೇನೆ' ಹೆಸರು ಮತ್ತು 'ಬಿಲ್ಲು–ಬಾಣ' ಚಿಹ್ನೆಯನ್ನು ನೀಡಿತ್ತು. ಇದೇ ವೇಳೆ, ಉದ್ಧವ್‌ ಠಾಕ್ರೆ ಬಣವನ್ನು ಶಿವಸೇನಾ (ಯುಬಿಟಿ) ಎಂದು ಕರೆದು, 'ಉರಿಯುವ ಜ್ಯೋತಿ'ಯನ್ನು ಚಿಹ್ನೆಯಾಗಿ ನೀಡಿತ್ತು.

ಕಳೆದ ವರ್ಷ ಜುಲೈನಲ್ಲಿ ಎನ್‌ಸಿಪಿಯ ಅಜಿತ್‌ ಪವಾರ್‌ ಬಣವೂ ಶಿಂದೆ ಸರ್ಕಾರದೊಂದಿಗೆ ಕೈಜೋಡಿಸಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಇದೇ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.